ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಚಾಣಾಕ್ಷ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 3ನೇ ಅಂಪೈರ್ ನಾಟ್ಔಟ್ ತೀರ್ಪು ಬಳಿಕ ಡಿಆರ್ಎಸ್ ಗೆ ಅಪೀಲ್ ಮಾಡಿ ಅದರಲ್ಲೂ ಯಶಸ್ವಿಯಾಗಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದು 9 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಸೋಲಿನ ಸುಳಿಯಲ್ಲಿತ್ತು. ಅಶ್ವಿನ್ ಓವರ್ ನಲ್ಲಿ ಬಾಂಗ್ಲಾದ ಹನ್ನೊಂದನೆ ಆಟಗಾರ ಟಸ್ಕಿನ್ ಅಹ್ಮದ್ ಎದುರಿಸಿದ್ದರು. ಈ ವೇಳೆ ಚೆಂಡನ್ನು ಕ್ಯಾಚ್ ಪಡೆಯಲಾಗಿತ್ತು.
ಕೂಡಲೇ ಟೀಂ ಇಂಡಿಯಾ ಆಟಗಾರರು ಕ್ಯಾಚ್ ಔಟ್ ಗೆ ಫೀಲ್ಡ್ ಅಂಪೈರ್ ಗೆ ಮನವಿ ಮಾಡಿದರು. ಫೀಲ್ಡ್ ಅಂಪೈರ್ ಗಳು ಮೂರನೇ ಅಂಪೈರ್ಗೆ ಮನವಿ ಮಾಡಿದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಬ್ಯಾಟ್ ಗೆ ಬಾಲ್ ತಗುಲದ್ದರಿಂದ ನಾಟ್ಔಟ್ ಎಂದು ತೀರ್ಪು ನೀಡಿದರು.
ಪರಿಶೀಲನೆ ವೇಳೆ ಎಲೆಕ್ಟ್ರಾನಿಕ್ ಬೋರ್ಡ್ ನಲ್ಲಿ ಕ್ಯಾಚ್ ಔಟ್ ಬದಲಿಗೆ ಎಲ್ ಬಿ ಔಟ್ ಆಗಿರುವುದು ಎಲ್ಲರಿಗೂ ಖಚಿತವಾಗಿತ್ತು. ಇದನ್ನು ಅರಿತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಆರ್ಎಸ್ ಮೂಲಕ ಎಲ್ಬಿಗೆ ಮನವಿ ಮಾಡಿದರು. ಎಲ್ಬಿ ಮನವಿ ಸ್ವೀಕರಿಸಿದ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು.