
ನವದೆಹಲಿ: ಅದ್ಭುತ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಸಂಘಚಿತ ಹೋರಾಟದಿಂದ ಮಾತ್ರ ತಡೆಯಲು ಸಾಧ್ಯ ಎಂದು ಆಸ್ಟ್ರೇಲಿಯಾ ತಂಡ ಮಾಜಿ ಆಟಗಾರ ಮೈಕಲ್ ಹಸ್ಸಿ ಹೇಳಿದ್ದಾರೆ.
ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಹಿನ್ನಲೆಯಲ್ಲಿ ಮಾತನಾಡಿದ ಆಸಿಸ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಮೈಕಲ್ ಹಸ್ಸಿ, ನನ್ನ ಅಭಿಪ್ರಾಯದಂತೆ ಆಸ್ಚ್ರೇಲಿಯಾ ತಂಡದ ಭಾರತ ಪ್ರವಾಸ ಖಂಡಿತಾ ಸವಾಲಿನಿಂದ ಕೂಡಿರುತ್ತದೆ. ತವರಿನಲ್ಲಿ ಟೀಂ ಇಂಡಿಯಾವನ್ನು ಎದುರಿಸುವುದು ಕಷ್ಟಸಾಧ್ಯವೇ ಆದರೂ, ಸಂಘಟಿತ ಹೋರಾಟದ ಮೂಲಕ ಆ ತಂಡಕ್ಕೆ ತಿರುಗೇಟು ನೀಡಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ಹಸ್ಸಿ, ಸತತ ನಾಲ್ಕೈದು ಸರಣಿಗಳಲ್ಲಿ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ. ಹೀಗಾಗಿ ಓರ್ವ ಬೌಲರ್ ನಿಂದ ಕೊಹ್ಲಿಯನ್ನು ತಡೆಯಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದ ಇಡೀ ತಂಡದ ಒಗ್ಗೂಡ ಆಡಿದರೆ ಮಾತ್ರ ಕೊಹ್ಲಿಯನ್ನು ತಡೆಯಬಹುದು. ಕೊಹ್ಲಿಗೆ ಸವಾಲೆಸೆಯಬಲ್ಲ ಬೌಲರ್ ಆಸಿಸ್ ತಂಡದಲ್ಲಿದ್ದು, ಸ್ಟಾರ್ಕ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರ ರಿವರ್ಸ್ ಸ್ವಿಂಗ್ ಎಸೆತಗಳು ಅದ್ಬುತವಾಗಿರುತ್ತದೆ. ಕೊಹ್ಲಿ ಅವರಿಗೆ ಸ್ಟ್ರಾರ್ಕ್ ಖಂಡಿತ ಸವಾಲೆಸೆಯಬಲ್ಲರು ಎಂದು ಹಸ್ಸಿ ಹೇಳಿದ್ದಾರೆ.
Advertisement