ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಸುಪ್ರೀಂ ಕೋರ್ಟ್ ತಮ್ಮನ್ನು ವಜಾಗೊಳಿಸಿದ ನಿರ್ಧಾರವನ್ನು ಗೌರವಿಸುವುದಾಗಿ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಸೋಮವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ವಿಡಿಯೋ ಟ್ವೀಟ್ ಮಾಡಿರುವ ಠಾಕೂರ್, ಭಾರತೀಯ ಕ್ರಿಕೆಟ್ ಗಾಗಿ ಸೇವೆ ಸಲ್ಲಿಸದ ಬಗ್ಗೆ ನನಗೆ ಹೆಮ್ಮೆ ಇದೆ. ಬಿಸಿಸಿಐ ದೇಶದಲ್ಲಿಯೇ ಒಂದು ಉತ್ತಮ ಕ್ರೀಡಾ ಸಂಸ್ಥೆಯಾಗಿದ್ದು, ಆಟದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ ಮತ್ತು ಇದು ಮುದುವರೆಯಲಿ ಎಂದು ಹೇಳಿದ್ದಾರೆ.
ಭಾರತ ವಿಶ್ವದಲ್ಲಿಯೇ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ಹೊಂದಿದೆ. ನನಗೆ ಇದು ವೈಯಕ್ತಿಕ ಹೋರಾಟ ಅಲ್ಲ. ಕ್ರೀಡಾ ಸಂಸ್ಥೆಯ ಸ್ವಾಯತ್ತತೆಗಾಗಿ ಹೋರಾಟ ನಡೆಸಿದ್ದೆ. ಆದರೆ ಒಬ್ಬರ ಭಾರತೀಯನಾಗಿ ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇನೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಒಂದು ವೇಳೆ ನಿವೃತ್ತ ನ್ಯಾಯಾಧೀಶರಡಿ ಭಾರತೀಯ ಕ್ರಿಕೆಟ್ ಮತ್ತಷ್ಟು ಅಭಿವೃದ್ಧಿಯಾಗುತ್ತೆ ಅಂತ ಭಾವಿಸಿದರೆ, ನಾನು ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದಿದ್ದಾರೆ,
ಕ್ರಿಕೆಟ್ ಆಡಳಿತದಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿರುವ ಸುಪ್ರೀಂ ಕೋರ್ಟ್, ಇಂದು ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸಿದ್ದು, ಬಿಸಿಸಿಐಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.