

ಬೆಂಗಳೂರು: ಕ್ರಿಕೆಟ್ ನನ್ನ ಇಡೀ ಜೀವನಕ್ಕೆ ನೀಡಿದ ಕೊಡುಗೆ ಅತ್ಯದ್ಭುತ. ಕ್ರಿಕೆಟ್ ಎನ್ನುವ ಉಡುಗೊರೆ ಈವರೆಗೂ ವಿಶೇಷವಾದುದನ್ನು ನನಗೆ ನೀಡುತ್ತಲೇ ಇದೆ. ಸ್ನೇಹ, ಅನುಭವ, ಅಫೆಕ್ಷನ್ ಹೀಗೆ ಇನ್ನೂ ಹಲವನ್ನು ನನಗೆ ನೀಡಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ವಿಡಿಯೋವೊಂದರಲ್ಲಿ ಹಂಚಿಕೊಂಡಿದ್ದಾರೆ.
ನಿನ್ನೆ 44ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ದ್ರಾವಿಡ್ ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯನ್ನು ಚಿಕ್ಕ ವಿಡಿಯೋವೊಂದರಲ್ಲಿ ದಾಖಲಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಕ್ರಿಕೆಟ್ ಕುರಿತು ಪ್ರೀತಿ ಹುಟ್ಟಿದ್ದು ಯಾವಾಗ ಎನ್ನುವ ಕಥೆ ಎಲ್ಲರಲ್ಲೂ ಇರುತ್ತದೆ. ಅಪ್ಪನ ಜತೆ ರೇಡಿಯೋದಲ್ಲಿ ಬರುತ್ತಿದ್ದ ಕ್ರಿಕೆಟ್ ಕಾಮೆಂಟರಿಯನ್ನು ಕೇಳುವಾಗ...ಜನ್ಮದಿನದಂದು ಉಡುಗೊರೆಯಾಗಿ ಬಂದ ಕ್ರಿಕೆಟ್ ಬ್ಯಾಟ್ ಮೂಲಕ, ಕ್ರಿಕೆಟ್ ನಲ್ಲಿ ಶಾಲಾ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿದಾಗ ಹಾಗೂ ರಾಷ್ಟ್ರೀಯ ತಂಡದ ಪರ ಆಡಲು ಮೊದಲ ಬಾರಿ ಕ್ಯಾಪ್ ಪಡೆದದ್ದು ನಿಜಕ್ಕೂ ಅವಿಸ್ಮರಣೀಯ ಎಂದರು.