

ಕಟಕ್: ನಾಯಕ ವಿರಾಟ್ ಕೊಹ್ಲಿಯವರು ನನ್ನ ಮೇಲಿಟ್ಟ ನಂಬಿಕೆಯೇ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಸಿಡಿಸಲು ಕಾರಣವಾಯಿತು ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.
ಭಾರತ-ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಯುವರಾಜ್ ಸಿಂಗ್ ಅವರು ಭಾಜನರಾಗಿದ್ದು. ಮಾರಣಾಂತಿಕ ಕಾಯಿಲೆ ಕ್ಯಾನ್ಸರ್'ಗೆ ಒಳಗಾಗಿ ಸಾವನ್ನೂ ಗೆದ್ದು ಬಂದಿದ್ದ ಯುವರಾಜ್ ಸಿಂಗ್ ಅವರು ಕ್ರಿಕೆಟ್ ರಂಗಕ್ಕೆ ಹಿಂತಿರುಗಿ ಬಂದ ನಂತರ ಹೆಚ್ಚಾಗಿ ಮಿಂಚಿರಲಿಲ್ಲ. ಆರು ವರ್ಷಗಳ ಬಳಿಕ ಇದೀಗ ಯುವರಾಜ್ ಸಿಂಗ್ ಅವರು ಶತಕ ಸಿಡಿಸಿದ್ದು, ಈ ಮೂಲಕ ಮತ್ತೆ ತಮ್ಮ ಮಿಂಚಿನ ಓಟವನ್ನು ಮತ್ತೆ ಆರಂಭಿಸಿದ್ದಾರೆ.
ನಿನ್ನೆ ನಡೆದ ಪಂದ್ಯದ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಸಹ ಆಟಗಾರರು ಹಾಗೂ ನಾಯಕನೊಬ್ಬ ಬೆನ್ನಿಗೆ ನಿಂತಾಗ ಸಹಜವಾಗಿಯೇ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ನಾಯಕ ವಿರಾಟ್ ಕೊಹ್ಲಿವಯವರು ನನ್ನ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿದ್ದರು. ಈ ನಂಬಿಕೆಯೇ ನಾನು ಶತಕ ಸಿಡಿಸಲು ಕಾರಣವಾಯಿತು ಎಂದು ಹೇಳಿದ್ದಾರೆ.
ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳಬೇಕೋ ಅಥವಾ ವಿದಾಯ ಘೋಷಿಸಬೇಕೋ ಎಂಬುದರ ಬಗ್ಗೆ ನಾನು ಆಲೋಚನೆ ಮಾಡಿದ್ದೆ. ನನ್ನ ಜೀವನರ ಪ್ರಯಾಣದ ಉದ್ದಕ್ಕೂ ಸಾಕಷ್ಟು ಜನರು ನನಗೆ ಬೆಂಬಲವನ್ನು ವ್ಯಕ್ತಪಡಿಸಿದ್ದರು. ನನ್ನ ಜೀವನದಲ್ಲಿ ಹಿಂದೆ ಸರಿಯುವ ಸಿದ್ಧಾಂತವೇ ಇಲ್ಲ. ನನ್ನ ಪರಿಶ್ರಮವನ್ನು ನಾನು ಬಿಡಲಿಲ್ಲ. ಸಮಯ ಬದಲಾಗುತ್ತದೆ ಎಂದು ನಾನು ನಂಬಿದ್ದೆ.
2011ರ ವಿಶ್ವಕಪ್ ಬಳಿಕ ಈ ಗ ಶತಕ ಸಿಡಿಸಲು ಸಾಧ್ಯವಾಗಿದೆ. ಇದು ನನಗೆ ಹೆಚ್ಚು ತೃಪ್ತಿಯನ್ನು ನೀಡಿದೆ. 3 ವರ್ಷಗಳ ಬಳಿಕ ರಾಷ್ಟ್ರೀಯ ಏಕದಿನ ತಂಡಕ್ಕೆ ಮರಳಿದ ನಾನು ಆರಂಭದಲ್ಲಿ ಫಿಟ್ ನೆಸ್ ಸಮಸ್ಯೆ ಎದುರಿಸಬೇಕಾಗಿತ್ತು. ನಂತರ ಸಾಕಷ್ಟು ಪರಿಶ್ರಮ ಪಟ್ಟಿದ್ದೆ.
ಯಾರು ಏನು ಪ್ರತಿಕ್ರಿಯೆ ನೀಡುತ್ತಾರೆಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ದಿನಪತ್ರಿಕೆಗಳನ್ನು ಓದುವುದಿಲ್ಲ. ಟಿವಿಯನ್ನು ನೋಡುವುದಿಲ್ಲ. ನನ್ನ ಆಟಗ ಬಗ್ಗೆಯಷ್ಟೇ ನಾನು ಗಮನ ಹರಿಸುತ್ತೇನೆ. ಅಂತರಾಷ್ಟ್ರೀಯ ಕ್ರಿಕೆಟ್ ನಾನು ಉತ್ತಮ ಆಟಗಾರನಾಗಿದ್ದೆನೆಂದು ನಾನು ನಂಬಿದ್ದೆ. ಈಗಲೂ ನಾನು ಉತ್ತಮ ಆಟಗಾರನಾಗಿದ್ದೇನೆಂಬ ನಂಬಿಕೆ ನನಗಿದೆ.
ಏಕದಿನ ಪಂದ್ಯದಲ್ಲಿ 150 ರನ್ ನಿಜಕ್ಕೂ ಉತ್ತಮವಾದ ಸ್ಕೋರ್. ಬಹಳ ಸಮಯದ ಬಳಿಕ ಹೆಚ್ಚಿನ ರನ್ ಗಳನ್ನು ಕಲೆಹಾಕಿದೆ. ಇದು ನನಗೆ ತೃಪ್ತಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರನ್ ಕಲೆ ಹಾಕುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.