

ಲಂಡನ್: ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ನಿಂದ ನಿವೃತ್ತಿಯಾದರೂ ತಮ್ಮ ವಿಭಿನ್ನ ಟ್ವೀಟ್ ಗಳ ಮೂಲಕ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಇದೀಗ ಸೆಹ್ವಾಗ್ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಆಸಿಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ರನ್ನು ವ್ಯಾಪಕವಾಗಿ ಕಾಲೆಳೆದಿದ್ದಾರೆ.
ಹೌದು..ಲಂಡನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವ ಸೆಹ್ವಾಗ್ ತಮ್ಮ ಸಹವರ್ತಿಗಳಾದ ಸೌರವ್ ಗಂಗೂಲಿ ಹಾಗೂ ಶೇನ್ ವಾರ್ನ್ ರ ಕಾಲೆಳೆಯುವ ಮೂಲಕ ಟ್ವಿಟರ್ ನಲ್ಲಿ ಮತ್ತೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಭಾನುವಾರ ಲಂಡನ್ ನ ಎಡ್ಜ್ ಬ್ಯಾಸ್ಟನ್ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಸಹ ವೀಕ್ಷಕ ವಿವರಣೆಗಾರರಾಗಿದ್ದ ಸೌರವ್ ಗಂಗೂಲಿ ಹಾಗೂ ಶೇನ್ ವಾರ್ನ್ ಮಳೆ ವಿರಾಮದ ವೇಳೆ ಸ್ಟುಡಿಯೋದಲ್ಲಿ ಮಲಗಿದ್ದರು. ಈ ವೇಳೆ ತಮ್ಮ ಮೊಬೈಲ್ ಮೂಲಕ ಫೋಟೋ ತೆಗೆದ ವೀರೂ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿ ‘ಕನಸು ಕಾಣುವುದರಿಂದಲೇ ಭವಿಷ್ಯ ರೂಪುಗೊಳ್ಳುವುದು. ಈ ದಿಗ್ಗಜರು ಸಿಕ್ಕಿರುವ ಈ ಬಿಡುವಿನಲ್ಲೂ ನಿದ್ದೆ ಮಾಡುತ್ತಾ, ಕನಸು ಕಾಣುತ್ತಿದ್ದಾರೆ' ಎಂದು ಬರೆದಿದ್ದಾರೆ.
ಈ ಟ್ವೀಟ್ ಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು, ವೀರೂ ಟ್ವೀಟ್ "ಕನಸಿನ ಬೆನ್ನು ಹತ್ತಿ" ಎಂಬ ಟ್ರೆಂಡ್ ಆಗಿ ಹೋಗಿದೆ.
ಈ ಹಿಂದೆ ವಿಮಾನದಲ್ಲಿ ಪ್ರಯಾಣಿಸುವಾಗ ಸಚಿನ್ ತೆಂಡೂಲ್ಕರ್ ನಿದ್ರಿಸುತ್ತಿದ್ದ ಚಿತ್ರ ತೆಗೆದಿದ್ದ ವೀರೂ ಅವರನ್ನೂ ಕೂಡ ಬಿಡದೇ ಕಾಲೆಳೆದಿದ್ದರು.