
ಲಂಡನ್: ಐಸಿಸಿ ಟೂರ್ನಮೆಂಟ್ ಗಳಲ್ಲಿ ನೆಚ್ಚಿನ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಆಸ್ಟ್ರೇಲಿಯಾ ಇದೀಗ ತನ್ನ ಖ್ಯಾತಿ ಕಳೆದುಕೊಂಡಿದ್ದು, ಆ ಸ್ಥಾನಕ್ಕೆ ಇದೀಗ ಭಾರತ ತಂಡವೇ ಅಧಿಪತಿಯಾಗಿದೆ.
ಟಿ20 ವಿಶ್ವಕಪ್ ನಿಂದ ಆರಂಭವಾದ ಭಾರತ ತಂಡದ ಜೈತ್ರ ಯಾತ್ರೆ ಹಾಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಮುಂದುವರೆದಿದ್ದು, ಕಳೆದ ಬಾರಿ ಚಾಂಪಿಯನ್ ಆಗಿದ್ದ ಭಾರತ ತಂಡ ಇದೀಗ ಮತ್ತೆ ಪ್ರಶಸ್ತಿಗೆ ಪಾಕಿಸ್ತಾನದೊಂದಿಗೆ ಕಾದಾಡಲು ಸಜ್ಜಾಗಿದೆ. ಈ ಬಾರಿಯೂ ಪ್ರಶಸ್ತಿ ಗೆಲುವ ನೆಚ್ಚಿನ ತಂಡ ಭಾರತವೇ ಎಂದು ಹೇಳಲಾಗುತ್ತಿದೆ.
ಇನ್ನು 2011ರ ಬಳಿಕ ನಡೆದ ಐಸಿಸಿ ಟೂರ್ನಮೆಂಟ್ ಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ. 2011ರ ಬಳಿಕ ನಡೆದ ಒಟ್ಟು 7 ಟೂರ್ನಮೆಂಟ್ ಗಳಲ್ಲಿ ಭಾರತ ಈ ವರೆಗೂ 4 ಬಾರಿ ಫೈನಲ್ ಪ್ರವೇಶ ಮಾಡಿದ್ದು, 2 ಸೆಮಿಫೈನಲ್ ಗೇರಿತ್ತು. ಆ ಮೂಲಕ ಭಾರತ ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಶ್ರೀಲಂಕಾ ಒಟ್ಟು 3 ಬಾರಿ ಫೈನಲ್ ಪ್ರವೇಶ ಮಾಡಿ, 1 ಬಾರಿ ಸೆಮೀಸ್ ಹಂತಕ್ಕೇರಿತ್ತು. ಇನ್ನು 2 ಬಾರಿ ಫೈನಲ್ ಹಾಗೂ 1 ಸೆಮೀಸ್ ಗೆ ಬಂದಿದ್ದ ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದ್ದು, 2 ಬಾರಿ ಫೈನಲ್ ಹಾಗೂ 1 ಸೆಮೀ ಫೈನಲ್ ಗೇರಿದ್ದ ವೆಸ್ಟ್ ಇಂಡೀಸ್ ತಂಡ ನಾಲ್ಕನೇ ಸ್ಥಾನದಲ್ಲಿದೆ.
Advertisement