
ಪೋರ್ಟ್ ಆಫ್ ಸ್ಪೈನ್: ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಪ್ರಬಲ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಟೀಂ ಇಂಡಿಯಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಇಷ್ಟು ದಿನ ದೈತ್ಯ ಆಸ್ಟ್ರೇಲಿಯನ್ನರ ಹೆಸರಿನಲ್ಲಿದ್ದ ದಾಖಲೆಯನ್ನು ಕೊಹ್ಲಿ ಪಡೆ ತನ್ನ ಹೆಸರಿಗೆ ಬರೆದುಕೊಂಡಿದೆ.
ಇಷ್ಟು ದಿನ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 300 ಅಧಿಕ ರನ್ ಪೇರಿಸಿದ ದಾಖಲೆ ಆಸ್ಟ್ರೇಲಿಯನ್ನರ ಹೆಸರಿಲ್ಲಿತ್ತು. ಆದರೆ ಇದೀಗ ಆ ದಾಖಲೆ ಭಾರತದ ಪಾಲಾಗಿದ್ದು, ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಪೇರಿಸಿದ ತಂಡ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಅಂಕಿ ಅಂಶಗಳ ಪ್ರಕಾರ ಈ ವರೆಗೂ ಆಸ್ಟ್ರೇಲಿಯಾ ತಂಡ 95 ಬಾರಿ 300ಕ್ಕೂ ಹೆಚ್ಚು ರನ್ ಪೇರಿಸಿದೆ. ಟೀಂ ಇಂಡಿಯಾ ಕೂಡ 95 ಬಾರಿ 300ಕ್ಕೂ ಅಧಿಕ ರನ್ ಪೇರಿಸಿತ್ತು. ಆದರೆ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 310 ರನ್ ಗಳನ್ನು ಪೇರಿಸಿತ್ತು. ಇದು ಭಾರತದ 96ನೇ 300ಕ್ಕೂ ಅಧಿಕ ರನ್ ಆಗಿದ್ದು, ಇದೀಗ ಭಾರತ ತಂಡ ಅತೀ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಪೇರಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಭಾರತ 96 ಬಾರಿ 300ಕ್ಕೂ ಅಧಿಕ ಸ್ಕೋರ್ ದಾಖಲಿಸಿದ್ದು, ಇದರಲ್ಲಿ 75 ಪಂದ್ಯಗಳಲ್ಲಿ ಗೆಲುವು ಹಾಗೂ 19ರಲ್ಲಿ ಸೋಲನುಭವಿಸಿದೆ. ಎರಡು ಪಂದ್ಯಗಳು ಟೈ ಆಗಿವೆ. 95 ಬಾರಿ 300ಕ್ಕೂ ಅಧಿಕ ರನ್ ಗಳಿಸಿರುವ ಆಸ್ಟ್ರೇಲಿಯಾ 84 ಬಾರಿ ಗೆಲುವು ಸಾಧಿಸಿದೆ. ಇನ್ನು ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ 77 ಬಾರಿ 300ಕ್ಕೂ ಅಧಿಕ ರನ್ ಪೇರಿಸಿದ್ದು, ದಕ್ಷಿಣ ಆಫ್ರಿಕಾ 300ಕ್ಕೂ ಅಧಿಕ ರನ್ ಗಳಿಸಿದ್ದಾಗ ಕೇವಲ 7 ಬಾರಿ ಸೋತಿದೆ.
ಅಂತೆಯೇ 350-400 ಕ್ಕೂ ಅಧಿಕ ರನ್ ಗಳಿಕೆ ಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಭಾರತ ಒಟ್ಟು 23 ಬಾರಿ ಈ ಸಾಧನೆ ಮಾಡಿದ್ದು, ದಕ್ಷಿಣ ಆಫ್ರಿಕಾ ಆನಂತರದ ಸ್ಥಾನದಲ್ಲಿದೆ. 400ಕ್ಕೂ ಅಧಿಕ ಸ್ಕೋರ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಮತ್ತೊಮ್ಮೆ ಭಾರತ 2ನೇ ಸ್ಥಾನದಲ್ಲಿದ್ದು, ಭಾರತ 5 ಬಾರಿ ಈ ಸಾಧನೆ ಮಾಡಿತ್ತು. ಒಟ್ಟು 6 ಬಾರಿ 400ಕ್ಕೂ ಅಧಿಕ ರನ್ ಗಳಿಸಿರುವ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ.
ಭಾರತ 1996ರಲ್ಲಿ ಶಾರ್ಜಾದಲ್ಲಿ ನಡೆದಿದ್ದ ಏಕದಿನದಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಬಾರಿ 300ಕ್ಕಿಂತ ಹೆಚ್ಚು ರನ್ ಗಳಿಸಿತ್ತು. 1999ರಲ್ಲಿ ಟೌಂಟನ್‌ನಲ್ಲಿ ನಡೆದ ವಿಶ್ವಕಪ್ ನಲ್ಲಿ ಶ್ರೀಲಂಕಾದ ವಿರುದ್ಧ ಮೊದಲ ಬಾರಿ 350ಕ್ಕೂ ಅಧಿಕ ರನ್ ಹಾಗೂ 2007ರಲ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಬರ್ಮುಡಾ ತಂಡದ ವಿರುದ್ಧ ಮೊದಲ ಬಾರಿ 400ಕ್ಕೂ ಅಧಿಕ ಸ್ಕೋರ್ ದಾಖಲಿಸಿತ್ತು.
Advertisement