

ಕೊಲಂಬೋ: ಶ್ರೀಲಂಕಾ ಕ್ರೀಡಾ ಸಚಿವರನ್ನು ಕೋತಿ ಎಂಬ ಅರ್ಥದಲ್ಲಿ ಜರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಕಾ ವೇಗಿ ಲಸಿತ್ ಮಲಿಂಗಾಗೆ 6 ತಿಂಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಇತ್ತೀಚಿನ ಪ್ರದರ್ಶನದ ಕುರಿತಂತೆ ಈ ಹಿಂದೆ ಮಾತನಾಡಿದ್ದ ಕ್ರೀಡಾ ಸಚಿವ ದಯಸಿರಿ ಜಯಶೇಖರ ಅವರು ತಂಡದ ಫೀಲ್ಡಿಂಗ್ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ನಿರ್ಗಮಿಸಿದ ಲಂಕಾ ತಂಡದ ಆಟಗಾರರ ದೈಹಿಕ ಕ್ಷಮತೆಯನ್ನು ಕ್ರೀಡಾ ಸಚಿವರು ಪ್ರಶ್ನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಲಿಂಗಾ ಅವರನ್ನು ಮಾಧ್ಯಮದವರು ಕೇಳಿದಾಗ, ಕ್ರೀಡಾ ಸಚಿವ ದಯಸಿರಿ ಜಯಶೇಖರ ಅವರನ್ನೇ ಮಲಿಂಗಾ ಸಚಿವರನ್ನು ‘ಕೋತಿ'ಗೆ ಹೋಲಿಸಿ ವಿವಾದಕ್ಕೆ ಸಿಲುಕಿದ್ದರು.
ಮಲಿಂಗಾ ಅವರ ಹೇಳಿಕೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸಿದ್ದು, ಮಲಿಂಗಾರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಹೇಳಿ ಅವರಿಗೆ 6 ತಿಂಗಳ ನಿಷೇಧ ಹೇರಿದೆ. ಅಂತೆಯೇ ಮಂಡಳಿ ಅವರ ಮುಂದಿನ ಪಂದ್ಯದ ಶೇ.50ರಷ್ಟುಸಂಭಾವನೆಯನ್ನು ದಂಡವಾಗಿ ವಿಧಿಸಿದೆ. ಇದಲ್ಲದೆ ಮುಂದಿನ 6 ತಿಂಗಳಲ್ಲಿ ಈ ರೀತಿಯ ನಿಯಮ ಉಲ್ಲಂಘನೆಯಾದರೆ ಒಂದು ವರ್ಷ ಅವಧಿಗೆ ಅಮಾನತು ಮಾಡುವುದಾಗಿ ಎಚ್ಚರಿಸಿದೆ.