ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 93 ರನ್ ಗಳ ಭರ್ಜರಿ ಜಯ ಗಳಿಸಿದೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 251 ರನ್ ಪೇರಿಸಿತು. 252 ರನ್ ಗಳ ಗುರಿ ಬೆನ್ನಟ್ಟಿದ ವಿಂಡೀಸ್ ಭಾರತ ಬೌಲಿಂಗ್ ದಾಳಿಗೆ ತತ್ತರಿಸಿದ್ದು 158 ರನ್ ಗಳಿಗೆ ಸರ್ವಪತನ ಕಂಡಿತು.
ಭಾರತ ಪರ ಅಜಿಂಕ್ಯ ರಹಾನೆ 72, ಶಿಖರ್ ಧವನ್ 2, ವಿರಾಟ್ ಕೊಹ್ಲಿ 11, ಯುವರಾಜ್ ಸಿಂಗ್ 39, ಎಂಎಸ್ ಧೋನಿ ಅಜೇಯ 78 ಮತ್ತು ಕೇದರ್ ಜಾದವ್ 40 ರನ್ ಸಿಡಿಸಿದ್ದಾರೆ. ಇನ್ನು ವಿಂಡೀಸ್ ಪರ ಕಮ್ಮಿನ್ಸ್ 2, ಹೊಲ್ಡರ್ ಮತ್ತು ಬಿಶು ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಬ್ಯಾಟಿಂಗ್ ನಲ್ಲಿ ವೆಸ್ಟ್ ಇಂಡೀಸ್ ಪರ ಕೈಲ್ ಹೋಪ್ 19, ಶಾಯ್ ಹೋಪ್ 24, ಮೊಹಮ್ಮದ್ 40, ಪೊವೇಲ್ 30 ರನ್ ಸಿಡಿಸಿದ್ದಾರೆ. ಭಾರತ ಪರ ಕುಲ್ದೀಪ್ ಯಾದವ್ ಹಾಗೂ ಆರ್ ಅಶ್ವಿನ್ ತಲಾ 3 ವಿಕೆಟ್, ಹಾರ್ದಿಕ್ ಪಾಂಡ್ಯಾ 2 ವಿಕೆಟ್ ಪಡೆದಿದ್ದಾರೆ.
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಪಂದ್ಯಗಳನ್ನು ಗೆದ್ದಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಭಾರತ 105 ರನ್ ಗಳ ಅಂತರದಲ್ಲಿ ಜಯಗಳಿಸಿತ್ತು.