ಕನ್ನಡದಲ್ಲಿ ಐಪಿಎಲ್-10 ವೀಕ್ಷಕ ವಿವರಣೆ ಇಲ್ಲ: ಸೋನಿ ಟಿವಿ ಸ್ಪಷ್ಟನೆ

ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್-10 ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಕರ್ನಾಟಕದ ಅಭಿಮಾನಿಗಳಿಗೆ ಸೋನಿ ಟಿವಿ ನಿರಾಸೆ ಮೂಡಿಸಿದ್ದು, ಕನ್ನಡದಲ್ಲಿ ಐಪಿಎಲ್ ವೀಕ್ಷಕ ವಿವರಣೆ ಲಭ್ಯವಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್-10 ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಕರ್ನಾಟಕದ ಅಭಿಮಾನಿಗಳಿಗೆ ಸೋನಿ ಟಿವಿ ನಿರಾಸೆ ಮೂಡಿಸಿದ್ದು, ಕನ್ನಡದಲ್ಲಿ ಐಪಿಎಲ್ ವೀಕ್ಷಕ ವಿವರಣೆ  ಲಭ್ಯವಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಪ್ರೊ ಕಬ್ಬಡ್ಡಿಯಂತೆಯೇ ಐಪಿಎಲ್ ನ ವೀಕ್ಷಕ ವಿವರಣೆಯನ್ನು ಸ್ಥಳೀಯ ಭಾಷೆಗಳಲ್ಲಿ ನೀಡುವ ಸೋನಿ ಟಿವಿಯ ವಿನೂತನ ಪ್ರಯೋಗ ಈ ವರ್ಷವೂ ಮುಂದುವರೆದಿದೆಯಾದರೂ, ಕನ್ನಡಿಗರಿಗೆ ಮಾತ್ರ ಈ ಬಾರಿಯೂ ನಿರಾಸೆ  ಮುಂದುವರೆದಿದೆ. ಐಪಿಎಲ್ ಸೀಸನ್ 10 ವೀಕ್ಷಕ ವಿವರಣೆ ಕನ್ನಡದಲ್ಲಿ ಇರುವುದಿಲ್ಲ ಎಂದು ಸೋನಿಟಿವಿ ಸ್ಪಷ್ಟನೆ ನೀಡಿದ್ದು, ಕನ್ನಡ ಭಾಷೆಯನ್ನು ತನ್ನ ವೀಕ್ಷಕ ವಿವರಣೆ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಐಪಿಎಲ್ ವೀಕ್ಷಕ ವಿವರಣೆಯನ್ನು  ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ನೀಡಲಾಗುತ್ತಿದೆ. ಇದಕ್ಕೆ ಪ್ರತ್ಯೇಕವಾಗಿ ಯಾವುದೇ ವ್ಯವಸ್ಥೆ ಬೇಡವಾಗಿದ್ದು, ಪ್ರಸಾರಕರಿಂದ ನೇರ ಫೀಡ್ ಲಭ್ಯವಿರುತ್ತದೆ ಎಂದು ಸೋನಿಟಿವಿ ಸ್ಪಷ್ಟಪಡಿಸಿದೆ.

ತಮಿಳಿನಲ್ಲಿ ಷಡಗೋಪನ್ ರಮೇಶ್, ಹೇಮಂಗ್ ಬದಾನಿ ಮತ್ತು ವಿ.ಬಿ. ಚಂದ್ರಶೇಖರ್ ಕಾಮೆಂಟ್ರಿ ನೀಡಲಿದ್ದು, ತೆಲುಗಿನಲ್ಲಿ ವೆಂಕಟಾಪತಿ ರಾಜು, ವೇಣುಗೋಪಾಲ ರಾವ್ ಮತ್ತು ಕಲ್ಯಾಣ ಕೃಷ್ಣನ್ ವೀಕ್ಷಕ ವಿವರಣೆಗಾರರಾಗಿದ್ದಾರೆ.  ಸೋನಿ ಸಿಕ್ಸ್ ನಲ್ಲಿ ಇಂಗ್ಲೀಷ್ ಫೀಡ್ ಸಿಗಲಿದ್ದು, ಸೋನಿ ಮ್ಯಾಕ್ಸ್ ನಲ್ಲಿ ಹಿಂದಿ ಆವೃತ್ತಿ ಪ್ರಸಾರವಾಗಲಿದೆ. ಈ ಹಿಂದೆ ಸುವರ್ಣ ಚಾನೆಲ್ ನಲ್ಲಿ ಕನ್ನಡ ವೀಕ್ಷಕ ವಿವರಣೆ ಲಭ್ಯವಿತ್ತು.

ಕಳೆದ ಆವೃತ್ತಿಯಿಂದ ಕೆಲವು ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲು ಆರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೇ ಏಪ್ರಿಲ್ 5ರಿಂದ ಮೇ 21ರವರೆಗೆ 10ನೇ ಆವೃತ್ತಿಯ ಐಪಿಎಲ್ ಚುಟಕು ಕ್ರಿಕೆಟ್  ಸರಣಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಕನ್ನಡ ಕಾಮೆಂಟ್ರಿ ಕೇಳುವ ತವಕದಲ್ಲಿದ್ದರು. ಸೋನಿ ಟಿವಿ ನಿರ್ಧಾರ ಇದೀಗ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com