

ನವದೆಹಲಿ: ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯಕ್ಕೆ ತಂಡ ಪ್ರಮುಖ ಬ್ಯಾಟ್ಸಮನ್ ಕೆಎಲ್ ರಾಹುಲ್ ಅವರ ಅಲಭ್ಯತೆಯೇ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.
ಖಾಸಗಿ ಕ್ರೀಡಾ ವೆಬ್ ಸೈಟ್ ನೊಂದಿಗೆ ಮಾತನಾಡಿದ ರಿಕ್ಕಿ ಪಾಂಟಿಂಗ್, ತಮ್ಮದೇ ಆದ ಧಾಟಿಯಲ್ಲಿ ಆರ್ ಸಿಬಿಯ ವೈಫಲ್ಯವನ್ನು ವಿಶ್ಲೇಷಿಸಿದರು. ಪ್ರಮುಖವಾಗಿ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿದ್ದ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಬೆಂಗಳೂರು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು ಎಂದು ಪಾಂಟಿಂಗ್ ಹೇಳಿದ್ದಾರೆ.
"ತಂಡದ ಪ್ರಮುಖ ಬ್ಯಾಟ್ಸಮನ್ ಗಳಾದ ವಿರಾಟ್ ಕೊಹ್ಲಿ, ಎಬಿಡಿವಿಲಿಯರ್ಸ್, ಕ್ರಿಸ್ ಗೇಯ್ಲ್ ಅವರ ವೈಫಲ್ಯ ಕೂಡ ತಂಡವನ್ನು ಕಾಡಿತ್ತು. ಕಳೆದ ಬಾರಿಯ ಟೂರ್ನಿಯಲ್ಲಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಜೋಡಿ ಯಶಸ್ಸು ಸಾಧಿಸಿದ್ದರು. ಆದರೆ ಈ ಬಾರಿ ರಾಹುಲ್ ಅನುಪಸ್ಥಿತಿ ತಂಡವನ್ನು ವ್ಯಾಪಕವಾಗಿ ಕಾಡಿತ್ತು. ನನ್ನ ಪ್ರಕಾರ ರಾಹುಲ್ ಗಾಯಗೊಂಡಿದ್ದು, ಆರ್ ಸಿಬಿಗೆ ದೊಡ್ಡ ಹೊಡೆತವಾಗಿತ್ತು. ರಾಹುಲ್ ಅನುಪಸ್ಥಿತಿಯೆ ಇಂದಿನ ಆರ್ ಸಿಬಿ ತಂಡದ ಪರಿಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.
ಕಳೆದ ಬಾರಿಯ ಟೂರ್ನಿಯಲ್ಲಿ ರಾಹುಲ್ 6 ಪಂದ್ಯಗಳನ್ನಾಡಿದ್ದು, ನಾಲ್ಕು ಬಾರಿ 35ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಂತೆಯೇ ನಾಲ್ಕನೇ ಸ್ಥಾನದಲ್ಲಿ ಅಂದರೆ ಮಧ್ಯಮ ಕ್ರಮಾಂಕದಲ್ಲೂ ಉತ್ತಮ ರನ್ ಗಳಿಕೆ ಮಾಡುವ ಮೂಲಕ ತಂಡ ಕುಸಿತವನ್ನು ತಡೆದಿದ್ದರು. ಹೀಗಾಗಿ ಆರ್ ಸಿಬಿ ವೈಫಲ್ಯದಲ್ಲಿ ರಾಹುಲ್ ಅನುಪಸ್ಥಿತಿ ಪ್ರಮುಖ ಪಾತ್ರ ವಹಿಸಿದೆ ಎಂದು ಪಾಂಟಿಂಗ್ ಹೇಳಿದ್ದಾರೆ,