ಕೊಲಂಬೊ: ಟೀ ಇಂಡಿಯಾದ ನಾಯಕ, ರನ್ ಮಷೀನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಜಯಸೂರ್ಯ ದಾಖಲೆ ಮುರಿದು ಏಕದಿನದಲ್ಲಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದರು.
ಇದೀಗ ಲಂಕಾ ವಿರುದ್ಧದ ಐದನೇ ಪಂದ್ಯದಲ್ಲಿ ಸಹ ಶತಕ ಸಿಡಿಸಿರುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನು ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ 30ನೇ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
194 ಪಂದ್ಯಗಳಲ್ಲಿ 30ನೇ ಶತಕ ಸಿಡಿಸಿರುವ ಕೊಹ್ಲಿ ಸದ್ಯ ಜಂಟಿಯಾಗಿ 2ನೇ ಸ್ಥಾನಕ್ಕೇರಿದ್ದಾರೆ. ಇನ್ನು ಗರಿಷ್ಠ ಶತಕದ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 49 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಕೊಲಂಬೊದಲ್ಲಿ ನಡೆದ ಐದನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 116 ಎಸೆತಗಳಲ್ಲಿ ಅಜೇಯ 110 ರನ್ ಗಳನ್ನು ಸಿಡಿಸಿ 30ನೇ ಶತಕ ಬಾರಿಸಿದರು.