ಅಂಪೈರ್ ಕೈಯಿಂದ ಬಾಲ್ ತೆಗೆದುಕೊಂಡಿದ್ದೇಕೆ? ಎಂಎಸ್ ಧೋನಿ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂಪೈರ್ ಕೈಯಲ್ಲಿದ್ದ ಬಾಲ್ ಅನ್ನು ಎಂಎಸ್ ಧೋನಿ ಪಡೆಯುವ ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದರು.
ಅಂಪೈರ್ ಕೈಯಿಂದ ಚೆಂಡು ತೆಗೆದುಕೊಂಡ ಧೋನಿ
ಅಂಪೈರ್ ಕೈಯಿಂದ ಚೆಂಡು ತೆಗೆದುಕೊಂಡ ಧೋನಿ
ಲಂಡನ್: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂಪೈರ್ ಕೈಯಲ್ಲಿದ್ದ ಬಾಲ್ ಅನ್ನು ಎಂಎಸ್ ಧೋನಿ ಪಡೆಯುವ ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದರು.
ಆದರೆ ಇದೀಗ ಆ ಚರ್ಚೆ, ವಾದ-ವಿವಾದ ಮತ್ತು ನಿವೃತ್ತಿ ವಿಚಾರಕ್ಕೆ ಧೋನಿ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ಜ್ಞಾಪಕಾರ್ಥವಾಗಿ ಅಂದು ಚೆಂಡನ್ನು ಪಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೌದು.. ಇಂಗ್ಲೆಂಡ್​ ವಿರುದ್ಧದ ಮೂರು ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಭಾರತ ಸೋತು ಸರಣಿಯನ್ನೂ ಕೈಚೆಲ್ಲಿತ್ತು. ಪಂದ್ಯ ಮುಗಿದ ನಂತರ ಡ್ರೆಸ್ಸಿಂಗ್​ ರೂಂ ಕಡೆಗೆ ಹೆಜ್ಜೆ ಹಾಕುತ್ತಿದ್ದ ಆಟಗಾರರೊಂದಿಗೆ ಹಿಂದೆ ನಡೆದು ಬರುತ್ತಿದ್ದ ಧೋನಿ, ಅಂಪೈರ್​ ಬಳಿ ತೆರಳಿ ಪಂದ್ಯಕ್ಕೆ ಬಳಸಿದ್ದ ಚೆಂಡನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅಂಪೈರ್​ ಕೂಡ ಚೆಂಡನ್ನು ಧೋನಿಗೆ ಕೊಟ್ಟಿದ್ದರು.
ಈ ಘಟನೆ ನಡೆದದ್ದೇ ತಡ, ಧೋನಿ ತಮ್ಮ ಕೊನೆ ಪಂದ್ಯದ ಜ್ಞಾಪಕಾರ್ಥವಾಗಿ ಆ ಪಂದ್ಯದ ಚೆಂಡನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವರು ನಿವೃತ್ತಿ ಪಡೆಯಲಿದ್ದಾರೆ ಎಂದೆಲ್ಲ ಚರ್ಚೆಗಳು ನಡೆದಿದ್ದವು. ಆದರೆ, ಮಾಜಿ ಕ್ರಿಕೆಟಿಗ ಹಾಗೂ ತಂಡದ ಕೋಚ್  ರವಿಶಾಸ್ತ್ರಿ ಈ ಊಹಾಪೋಹಗಳಿಗೆಲ್ಲ ತೆರೆ ಎಳೆದು ಧೋನಿ ಇನ್ನೂ ಒಂದಷ್ಟು ಕಾಲ ಆಡಲಿದ್ದಾರೆ ಎಂದು ಹೇಳಿದ್ದರು. ಆದರೂ, ಘಟನೆ ಕುರಿತ ಅನುಮಾನಗಳು ಮಾತ್ರ ನಿವಾರಣೆಯಾಗಿರಲಿಲ್ಲ. ಆದರೆ, ಅಂದು ತಾವು ಚೆಂಡನ್ನು ಪಡೆದದ್ದು ಏಕೆ ಎಂದು ಧೋನಿ ಸ್ವತಃ ಈಗ ಬಹಿರಂಗಪಡಿಸಿದ್ದಾರೆ. 
ವಿಶ್ವಕಪ್ ಟೂರ್ನಿ ತರಬೇತಿಗಾಗಿ ಚೆಂಡು ಪಡೆದೆ: ಧೋನಿ
'ಮುಂದಿನ ವರ್ಷ ಇದೇ ಇಂಗ್ಲೆಂಡ್​ನಲ್ಲಿ ನಡೆಯಲಿರುವ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯ ತಯಾರಿಗಾಗಿ ನಾನು ಆ ಚೆಂಡನ್ನು ಪಡೆದುಕೊಂಡಿದ್ದೆ. ನಾವು ಮುಂದಿನ ವರ್ಷ ಇಂಗ್ಲೆಂಡ್​ ನಲ್ಲಿ ವಿಶ್ವಕಪ್​ ಆಡಬೇಕಾಗಿದೆ. ಹೀಗಾಗಿ ನಾವು ರಿವರ್ಸ್​ ಸ್ವಿಂಗ್​ನಿಂದ ಹೆಚ್ಚು ವಿಕೆಟ್​ ಗಳಿಸುವುದು ಮುಖ್ಯ. ಸದ್ಯ ರಿವರ್ಸ್​ ಸ್ವಿಂಗನಲ್ಲಿ ನಮಗೆ ಹೆಚ್ಚು ವಿಕೆಟ್​ ಸಿಗುತ್ತಿಲ್ಲ. ಆದರೆ, ಎದುರಾಳಿಗಳಿಗೆ ವಿಕೆಟ್​ ಸಿಗುತ್ತಿದೆ. ಬೌಲಿಂಗ್​ ನಲ್ಲಿ ಏನಾದರೂ ಸಂಗತಿಗಳು ತಿಳಿಯಬಹುದು ಎಂಬ ಕಾರಣಕ್ಕೆ ನಾನು ಆ ಚೆಂಡನ್ನು ಕೇಳಿ ಪಡೆದುಕೊಂಡೆ ಎಂದು ಅವರು ತಿಳಿಸಿದ್ದಾರೆ.
ಆ ಮೂಲಕ ತಮ್ಮ ನಿವೃತ್ತಿ ಕುರಿತಂತೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೂ ತೆರೆ ಎಳಿದಿರುವ ಧೋನಿ, ತಾವು ಮುಂದಿನ ವಿಶ್ವಕಪ್ ನಲ್ಲಿ ಆಡುವ ಕುರಿತು ಮುನ್ಸೂಚನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com