ಎಬಿಡಿ..'ಕ್ಯಾಚ್ ಆಫ್ ದಿ ಟೂರ್ನಮೆಂಟ್': ದಂಗಾದ ಕೊಹ್ಲಿ, ಆರ್ ಸಿಬಿ ಅಭಿಮಾನಿಗಳು, ವಿಡಿಯೋ ನೋಡಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿಯ ಎಬಿ ಡಿವಿಲಿಯರ್ಸ್ ಹಿಡಿದ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿಯ ಎಬಿ ಡಿವಿಲಿಯರ್ಸ್ ಹಿಡಿದ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯ ಆರ್ ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಎದುರಾಳಿ ತಂಡ ಗೆಲುವಿನ ಸನಿಹಕ್ಕೆ ತೆರಳಿ ಕೇವಲ 14 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತ್ತು. ಆದರೆ ಈ ಪಂದ್ಯ ಹಲವು ವೈಶಿಷ್ಟ್ಯಗಳನ್ನು ಹೊಂದಿತ್ತು. ರನ್ ಮಳೆ, ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಆರ್ ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ ಹಿಡಿದ ಅದ್ಬುತ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆರ್​ಸಿಬಿ ನೀಡಿದ್ದ 219 ರನ್​ಗಳ ಬೃಹತ್​ ಟಾರ್ಗೆಟ್​​ ಬೆನ್ನಟ್ಟಿದ  ಹೈದರಾಬಾದ್​​ ತಂಡದ ಓಪನರ್​ ಅಲೆಕ್ಸ್​ ಹೇಲ್ಸ್ ಆರಂಭದಿಂದಲೇ ಅಬ್ಬರಿಸುತ್ತಿದ್ದರು.  ಈ ವೇಳೆ ಹೇಲ್ಸ್ ಎರಡು ಬಾರಿ ಜೀವದಾನ ಪಡೆದರು. ಒಂದು ಕ್ಯಾಚ್​​ ಅನ್ನು ಟಿಮ್​ ಸೌಥಿ ಡ್ರಾಪ್​ ಮಾಡಿದರೆ, ಇನ್ನೊಂದು ಕ್ಯಾಚ್ ಅನ್ನು ಕ್ಯಾಪ್ಟನ್​ ಕೊಹ್ಲಿ ಕೈಚೆಲ್ಲಿದರು. ಇದರಿಂದ ಆರ್ ಸಿಬಿ ಅಭಿಮಾನಿಗಳು ತೀವ್ರ ನಿರಾಶೆ ಅನುಭವಿಸಿದರು. ಆದರೆ ಬಳಿಕ ಅಲೆಕ್ಸ್​ ಹೇಲ್ಸ್ ಸಿಕ್ಸರ್ ಗೆ ಬಾರಿಸಿದ ಚೆಂಡನ್ನು ಎಬಿ ಡಿವಿಲಿಯರ್ಸ್ ಹಿಡಿದ ಪರಿ ಮಾತ್ರ ನಿಜಕ್ಕೂ ಎಲ್ಲ ಹುಬ್ಬೇರಿಸಿತ್ತು.
24 ಎಸೆತಗಳಲ್ಲಿ 37 ರನ್​ ಗಳಿಸಿ ಸ್ಫೋಟಕ ಆರಂಭ ಪಡೆದಿದ್ದ ಅಲೆಕ್ಸ್​ ಹೇಲ್ಸ್, ಮೊಯಿನ್​​ ಅಲಿ ಎಸೆತದಲ್ಲಿ ಸಿಕ್ಸರ್​ ಬಾರಿಸಲು ಯತ್ನಿಸಿದರು. ಚೆಂಡು ಸಿಕ್ಸರ್ ಗೆ ಹೋಯಿತು ಎಂದೇ ಎಲ್ಲ ತಿಳಿದಿದ್ದರಾದರೂ, ಬೌಂಡರಿ  ಗೆರೆ ಬಳಿಯೇ ನಿಂತಿದ್ದ ಎಬಿ ಡಿವಿಲಿಯರ್ಸ್ ತಕ್ಷಣವೇ ಆಗಸಕ್ಕೆ ನೆಗೆದು ಸಿಕ್ಸರ್ ನತ್ತ ಹೋಗುತ್ತಿದ್ದ ಚೆಂಡನ್ನು ಹಿಡಿತಕ್ಕೆ ಪಡೆದರು. ಕೂಡಲೇ ಕೆಲ ಸೆಕೆಂಡ್ ಗಳ ಕಾಲ ಕ್ರೀಡಾಂಗಣ ಸ್ಥಬ್ದವಾಯಿತು. ಸಿಕ್ಸರ್ ಎಂದು ಸಂಭ್ರಮ ಪಡುತ್ತಿದ್ದ  ಹೈದರಾಬಾದ್ ಅಭಿಮಾನಿಗಳು ಕುಸಿದರು. ಆರ್ ಸಿಬಿ ಅಭಿಮಾನಿಗಳು ವಿಕೆಟ್ ಪಡೆದ ಸಂಭ್ರಮಾಚರಣೆ ನಡೆಸಿದರು.
ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸಹ ಆಟಗಾರರು ಕೂಡ ಎಬಿಡಿ ಅವರನ್ನು ತಬ್ಬಿ ಖುಷಿ ಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com