ಕೋಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಆಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇದೀಗ ತಮ್ಮ ಪಂದ್ಯ ಶ್ರೇಷ್ಠ ಪುರಸ್ಕಾರವನ್ನು ಆಫ್ಗಾನಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಿಗಾಗಿ ಅರ್ಪಣೆ ಮಾಡಿದ್ದಾರೆ. ರಶೀದ್ ಖಾನ್ ಕೋಲ್ಕತ್ತಾ ವಿರುದ್ದದ ಪಂದ್ಯದಲ್ಲಿ 10 ಎಸತೆಗಳಲ್ಲಿ 34 ರನ್ ಹಾಗೂ 3 ಪ್ರಮುಖ ವಿಕೆಟ್ ಗಳನ್ನು ಕಿತ್ತು ತಂಡ ಫೈನಲ್ ಗೆ ತಲುಪಲು ಕಾರಣಕರ್ತರಾಗಿದ್ದರು.
ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಪಂದ್ಯಾವಳಿಯ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದರು.
2018ರ ಐಪಿಎಲ್ ನಲ್ಲಿ ರಶೀದ್ ಖಾನ್ ಸದ್ಯ 16 ಪಂದ್ಯಗಳ ಪೈಕಿ 21 ವಿಕೆಟ್ ಗಳನ್ನು ಪಡೆದಿದ್ದಾರೆ.