'ನಿವೃತ್ತಿ' ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ 'ಮಾಹಿ'

ವಯಸ್ಸು ಕೇವಲ ಸಂಖ್ಯೆಯಷ್ಟೇ, ಉತ್ತಮ ಕ್ರಿಕೆಟ್ ಆಡಲು ವಯಸ್ಸಲ್ಲ, ಫಿಟ್ನೆಸ್ ಮತ್ತು ತರಬೇತಿ ಮುಖ್ಯ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
ಚೆನ್ನೈ ತಂಡದ ನಾಯಕ ಧೋನಿ
ಚೆನ್ನೈ ತಂಡದ ನಾಯಕ ಧೋನಿ
ಮುಂಬೈ: ವಯಸ್ಸು ಕೇವಲ ಸಂಖ್ಯೆಯಷ್ಟೇ, ಉತ್ತಮ ಕ್ರಿಕೆಟ್ ಆಡಲು ವಯಸ್ಸಲ್ಲ, ಫಿಟ್ನೆಸ್ ಮತ್ತು ತರಬೇತಿ ಮುಖ್ಯ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತ್ತು. ಆ ಮೂಲಕ ಚೆನ್ನೈ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿತು. ಅಂತೆಯೇ ಚೆನ್ನೈ ತಂಡಕ್ಕೆ ಇದು ಏಳನೇ ಐಪಿಎಲ್ ಫೈನಲ್ ಪಂದ್ಯವಾಗಿತ್ತು. 
ಇನ್ನು ಪ್ರಶಸ್ತಿ ಜಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧೋನಿ, ತಮ್ಮ ನಿವೃತ್ತಿ ವಿಚಾರದ ಕುರಿತು ಮಾತನಾಡುತ್ತಿರುವವರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ. ಐಪಿಎಲ್ ಟ್ರೋಫಿ ವಿಜಯದ ಬೆನ್ನಲ್ಲೇ ಮಾತನಾಡಿದ ಧೋನಿ, ನಾವು ವಯಸ್ಸಿನ ಕುರಿತು ಮಾತನಾಡುತ್ತೇವೆ. ಆದರೆ ಕ್ರಿಕೆಟ್ ನಲ್ಲಿ ವಯಸ್ಸಿಗಿಂತ ಫಿಟ್ನೆಸ್ ಮುಖ್ಯ. ಅಂಬಾಟಿ ರಾಯುಡು ತಮ್ಮ 33ನೇ ವಯಸ್ಸಿನಲ್ಲೂ ಎಳೆ ಹುಡುಗನಂತೆ ಬ್ಯಾಟ್ ಬೀಸುತ್ತಾರೆ. ಹೀಗಾಗಿ ವಯಸ್ಸು ಕೇವಲ ಸಂಖ್ಯೆಯಷ್ಟೇ. ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಬೇಡ ಎಂದು ಹೇಳಿದ್ದಾರೆ.
ಅಂತೆಯೇ ಕ್ರಿಕೆಟ್ ನಲ್ಲಿ ನೀವು 19-20 ವರ್ಷದವರೇ, ಅಥವಾ 30 ವರ್ಷ ದಾಟಿದವರೇ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ನೀವು ಎಷ್ಟು ಫಿಟ್ ಆಗಿದ್ದೀರಾ, ಉತ್ತಮ ಫಾರ್ಮ್ ನಲ್ಲಿದ್ದೀರಾ ಅಥವಾ ಇಲ್ಲವೇ ಎಂಬುದೇ ಮುಖ್ಯವಾಗುತ್ತದೆ. ಆನ್ ಫೀಲ್ಡ್ ನಲ್ಲಿ ಆಟಗಾರನ ಉತ್ತಮ ಪ್ರದರ್ಶನ ಗಣನೆಗೆ ಬರುತ್ತದೆಯೇ ಹೊರತು ಆತನ ವಯಸ್ಸಲ್ಲ. ವಾಟ್ಸನ್ ಜಿಗಿದು ಚೆಂಡು ಹಿಡಿಯಲೆತ್ನಿಸಿದಾಗ ಆತನಿಗೆ ಗಾಯವಾಗುತ್ತದೆ ಎಂದಾದರೆ ಜಿಗಿಯುವುದು ಬೇಡ ಎಂದು ನಾವು ಹೇಳಲೇಬೇಕು ಎಂದು ಧೋನಿ ಹೇಳಿದ್ದಾರೆ.
ಇನ್ನು ಫೈನಲ್ ಪಂದ್ಯದ ವಿಜಯದ ಕುರಿತು ಮಾತನಾಡಿ ಧೋನಿ, ಫೈನಲ್ ಪಂದ್ಯದ ಗೆಲುವು ನಮಗೆ ಅಷ್ಟು ಸುಲಭವಾಗಿರಲಿಲ್ಲ. ರಷೀದ್ ಖಾನ್ ರಷ್ಟೇ ಭುವನೇಶ್ವರ್ ಕುಮಾರ್ ಕೂಡ ಅಪಾಯಕಾರಿ ಬೌಲರ್. ಹೀಗಾಗಿ ಇಬರನ್ನೂ ಸಂಭಾಳಿಸಿಕೊಂಡು ರನ್ ವೇಗ ನಿಯಂತ್ರಿಸಿಕೊಂಡು ಆಡುವುದು ಸವಾಲಿನ ಕೆಲಸವಾಗಿತ್ತು. ನಿಜಕ್ಕೂ ಈ ಪಂದ್ಯದ ಗೆಲುವಿನ ಶ್ರೇಯ ಬ್ಯಾಟಿಂಗ್ ವಿಭಾಗಕ್ಕೆ ಪ್ರಮುಖವಾಗಿ ಶೇನ್ ವಾಟ್ಸನ್ ಗೆ ಸಲ್ಲಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹೇಳಿದ್ದಾರೆ.
ಯಾವುದೇ ಆಟಗಾರನಿಗೂ ತನ್ನ ಪ್ರತಿಯೊಂದು ಗೆಲುವೂ ವಿಶೇಷವಾಗಿರುತ್ತದೆ. ಸಾಕಷ್ಟು ಜನ ನಂಬರ್, ಅಂಕಿ ಅಂಶಗಳ ಕುರಿತು ಮಾತನಾಡುತ್ತಿದ್ದಾರೆ. ಇಂದು 27 ಗೆಲುವಾಗಿದ್ದು, ನನ್ನ ಜೆರ್ಸಿ ನಂಬರ್ 7 ಮತ್ತು ಇದು ನಮ್ಮ ಏಳನೇ ಫೈನಲ್ ಪಂದ್ಯ ಎಂದು ಧೋನಿ ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ತಂಡಗಳ ಪೈಕಿ ಚೆನ್ನೈ ತಂಡವನ್ನು ಅಂಕಲ್ಸ್ ತಂಡವೆಂದು ಟೀಕಿಸಲಾಗುತ್ತಿತ್ತು. ಕಾರಣ ಚೆನ್ನೈ ತಂಡದಲ್ಲಿದ್ದ ಬಹುತೇಕ ಆಟಗಾರರು 30 ದಾಟಿದವರಾಗಿದ್ದು, ಈ ಪೈಕಿ ಬಹುತೇಕರಿಗೆ ಮದುವೆ ಕೂಡ ಆಗಿದೆ. ಇದೇ ಕಾರಣಕ್ಕೆ ಚೆನ್ನೈ ತಂಡವನ್ನು ಆಂಕಲ್ಸ್ ಟೀಂ ಎಂದು ಹೇಳಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com