ಸ್ಮೃತಿ ಮಂಧಾನ ಅರ್ಧ ಶತಕ ವ್ಯರ್ಥ: ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ 23 ರನ್‌ಗಳಿಂದ ಸೋಲು!

ಒಂದೆಡೆ ಸ್ಫೋಟಕ ಆಟಗಾರ್ತಿ ಮಿಥಾಲಿ ರಾಜ್ ಗೆ ತಂಡದಲ್ಲಿ ಸಿಗದ ಅವಕಾಶ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ವೆಲ್ಲಿಂಗ್ಟನ್: ಒಂದೆಡೆ ಸ್ಫೋಟಕ ಆಟಗಾರ್ತಿ ಮಿಥಾಲಿ ರಾಜ್ ಗೆ ತಂಡದಲ್ಲಿ ಸಿಗದ ಅವಕಾಶ ಹಾಗೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಟೀಂ ಇಂಡಿಯಾ ಮೊದಲ ಟಿ20ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 23 ರನ್‌ ಗಳಿಂದ ಸೋಲು ಕಂಡಿದೆ. 
ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದ್ದ ನ್ಯೂಜಿಲೆಂಡ್ ವನಿತೆಯರು, ಚುಟುಕು ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು ಭಾರತಕ್ಕೆ ತಿರುಗೇಟು ನೀಡಿದರು.
ಆತಿಥೇಯರ ಮೊದಲ ಪಂದ್ಯದ ಗೆಲುವಿನಲ್ಲಿ ಸೋಫಿ ಡಿವೈನ್ ( 62 ರನ್, 48 ಎಸೆತಗಳು) ಸ್ಫೋಟಕ ಬ್ಯಾಟಿಂಗ್ ಹಾಗೂ ಲೀ ಟಾಹುಹು (20 ಕ್ಕೆ 3) ಮಾರಕ ದಾಳಿ ಅತ್ಯಂತ ಪ್ರಮುಖ ಪಾತ್ರ ವಹಿಸಿತು. ಇದರಿಂದಾಗಿ ಕಿವಿಸ್‌ 23 ರನ್‌ಗಳಿಂದ ಗೆದ್ದು ಬೀಗಿತು. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್‌ 1-0 ಮುನ್ನಡೆ ಪಡೆಯಿತು. 
ಇಲ್ಲಿನ ವೆಸ್ಟ್‌ಪ್ಯಾಕ್ ಅಂಗಳದಲ್ಲಿ ನ್ಯೂಜಿಲೆಂಡ್‌ ನೀಡಿದ 160 ರನ್ ಸವಾಲಿನ ಗುರಿ ಬೆನ್ನತ್ತಿದ ಭಾರತ, ಲೀ ಟಾಹುಹು ಅವರ ಮಾರಕ ದಾಳಿಗೆ ನಲುಗಿ 19.1 ಓವರ್‌ಗಳಲ್ಲಿ 136 ರನ್‌ಗಳಿಗೆ ಸರ್ವ ಪತನಗೊಂಡು ಸೋಲು ಒಪ್ಪಿಕೊಂಡಿತು. ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ನಾಯಕಿ ಸತ್ತೇರ್‌ವೇಟ್‌ ಅವರು ಆರಂಭಿಕ ಆಘಾತ ನೀಡಿದರು. ತಂಡದ ಮೊತ್ತ 4 ರನ್‌ ಇರುವಾಗಲೇ ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ( 4 ರನ್‌) ಅವರನ್ನು ಕಿವಿಸ್‌ ನಾಯಕಿ ಔಟ್‌ ಮಾಡಿದರು.
ಮಂಧಾನ-ರೋಡ್ರಿಗಸ್‌ ಜತೆಯಾಟ ವ್ಯರ್ಥ: 
ತಂಡದ ಮೊತ್ತ 4 ರನ್‌ ಇರುವಾಗ ಜತೆಯಾದ ಸ್ಮೃತಿ ಮಂಧಾನ ಹಾಗೂ ರೋಡ್ರಿಗಸ್‌ ಜೋಡಿ ಅಮೋಘ ಜತೆಯಾಟವಾಡಿತು. ಈ ಜೋಡಿ ಕಿವಿಸ್‌ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿತು. ಆರಂಭಿಕ 10 ಓವರ್‌ಗಳಲ್ಲಿ ಇವರಿಬ್ಬರ ಬ್ಯಾಟಿಂಗ್‌ ಎದುರಾಳಿ ಬೌಲರ್‌ಗಳಲ್ಲಿ ನಡುಕು ಉಂಟಮಾಡಿತ್ತು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 98 ರನ್‌ ಸೇರಿಸುವ ಮೂಲಕ ತಂಡದ ಮೊತ್ತ ಬಹುಬೇಗ 100ರ ಗಡಿ ದಾಟಲು ನೆರವಾಯಿತು. ಇನ್ನೇನು ತಂಡವನ್ನು ಗೆಲುವಿನ ಗೆರೆ ದಾಟಿಸುತ್ತಾರೆಂದೇ ಎಲ್ಲರು ಭಾವಿಸಿದ್ದರು. ಆದರೆ, ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಈ ಜೋಡಿಯನ್ನು ಬೇರ್ಪಡಿಸಿದರು. 
ಏಕದಿನ ಸರಣಿಯಲ್ಲಿ ಮಿಂಚಿದ್ದ ಸ್ಮೃತಿ ಮಂಧಾನ ಟಿ-20 ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಎದುರಿಸಿದ ಕೇವಲ 34 ಎಸೆತಗಳಲ್ಲಿ ಮೂರು ಸಿಕ್ಸರ್‌ ಏಳು ಬೌಂಡರಿಯೊಂದಿಗೆ 58 ರನ್ ಗಳಿಸಿದರು. ಅರ್ಧ ಶತಕ ಗಳಿಸಿ ಮುನ್ನುಗ್ಗುತ್ತಿದ್ದ ಅವರನ್ನು ಅಮೆಲಿಯಾ ಕೆರ್ ಪೆವಿಲಿಯನ್‌ಗೆ ಕಳುಹಿಸಿದರು. ಇವರ ಹಿಂದೆಯೇ 39 ರನ್‌ ಗಳಿಸಿ ಆಡುತ್ತಿದ್ದ ರೋಡ್ರಿಗಸ್‌ ಅವರು ಲೀ ಟಾಹುಹು ಅವರಿಗೆ ಶರಣಾದರು. ನಂತರ ಕ್ರೀಸ್‌ಗೆ ಬಂದ ಹೇಮಲತಾ (3 ರನ್‌) ಹಾಗೂ ನಾಯಕಿ ಹರ್ಮಾನ್ ಪ್ರೀತ್‌ ಕೌರ್‌ (17) ಹೆಚ್ಚು ಹೊತ್ತು ಉಳಿಯಲಿಲ್ಲ. ಅಂತಿಮವಾಗಿ ಭಾರತ 23 ರನ್ ಗಳಿಂದ ಸೋಲು ಅನುಭವಿಸಿತು. 
ಲೀ ಟಾಹುಹು ಮೂರು ವಿಕೆಟ್‌ ಪಡೆದರೆ, ಕ್ಯಾಸ್ಪರೆಕ್ ಹಾಗೂ ಅಮೆಲಿಯಾ ತಲಾ ಎರಡು ವಿಕೆಟ್‌ ಉರುಳಿಸಿದರು. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ ದಾಖಲಿಸಿದ್ದು, ಭಾರತ ಮಹಿಳಾ ತಂಡಕ್ಕೆ 160 ರನ್ ಸವಾಲಿನ ಗುರಿ ನೀಡಿತು.
ನ್ಯೂಜಿಲೆಂಡ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಭಾರತದ ಬೌಲರ್ ಗಳನ್ನು ಚೆಂಡಾಡಿದರು. ಕ್ರೀಸ್‌ ಗೆ ಬಂದಾಗಿನಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತವರು ಅಭಿಮಾನಿಗಳನ್ನು ರಂಜಿಸಿದರು. ಎದುರಿಸಿದ 48 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಆರು ಬೌಂಡರಿಯೊಂದಿಗೆ ಒಟ್ಟು 62 ರನ್ ಸಿಡಿಸಿ ತಂಡವನ್ನು ಬಹುಬೇಗ 100ರ ಗಡಿ ದಾಟಿಸಿದರು. ಅರ್ಧ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಇವರನ್ನು ಅರುಂಧತಿ ರೆಡ್ಡಿ ಕಟ್ಟಿ ಹಾಕಿದರು.
ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡುತ್ತಿದ್ದ ಆಮಿ ಸತ್ತೇರ್ವೇಟ್ ಕೂಡ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಇವರು ಆಡಿದ 27 ಎಸೆತಗಳಲ್ಲಿ 33 ರನ್ ಗಳಿಸಿ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದರು. ನಂತರ ಕೊನೆಯ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಕೇಟಿ ಮಾರ್ಟಿನ್ ಕೇವಲ 14 ಎಸೆತಗಳಲ್ಲಿ 27* ರನ್ ಗಳಿಸಿ ತಂಡದ ಮೊತ್ತ 150 ರ ಗಡಿ ದಾಟುವಲ್ಲಿ ವಿಶೇಷ ಪಾತ್ರ ವಹಿಸಿದರು.
ಭಾರತದ ಪರ ದೀಪ್ತಿ ಶರ್ಮಾ ನಾಲ್ಕು ಓವರ್ ಗಳಿಗೆ ಕೇವಲ 19 ರನ್ ನೀಡಿ ಒಂದು ವಿಕೆಟ್ ಪಡೆದರು. ಇವರನ್ನು ಬಿಟ್ಟರೆ ಇನ್ನುಳಿದ ಬೌಲರ್‌ಗಳು ಕಿವಿಸ್ ಎದುರು ದುಬಾರಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com