ಆರ್ಸಿಬಿ 67 ರನ್ ಗೆ 2 ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿದಾಗ ಜತೆಯಾದ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಗೆಲುವಿನ ಆಸೆ ಬಲಪಡಿಸಿದರು. ಇವರಿಬ್ಬರು 3ನೇ ವಿಕೆಟ್ಗೆ 49 ರನ್ ಜತೆಯಾಟವಾಡಿದರು. ಇನಿಂಗ್ಸ್ ನ 14ನೇ ಓವರ್ ನಲ್ಲಿ ಗೆಲುವಿಗೆ 39 ಎಸೆತಗಳಲ್ಲಿ 72 ರನ್ ಬೇಕಿದ್ದಾಗ ಕೊಹ್ಲಿ, ಬುಮ್ರಾ ಎಸೆತದಲ್ಲಿ ಪುಲ್ ಮಾಡಲು ಯತ್ನಿಸಿ ಮಿಡ್ ವಿಕೆಟ್ ನಲ್ಲಿದ್ದ ಹಾರ್ದಿಕ್ ಪಾಂಡ್ಯಾಕ್ಕೆ ಕ್ಯಾಚ್ ನೀಡಿದರು. ಬಳಿಕ ಎಬಿ ಡಿವಿಲಿಯರ್ಸ್ ಏಕಾಂಗಿ ಹೋರಾಟ ಮುಂದುವರಿಸಿದರು. ಆದರೆ ಬುಮ್ರಾ ಬಿಗಿ ದಾಳಿ ಎದುರು ಚೇಸಿಂಗ್ ಸುಲಭವಾಗಿರಲಿಲ್ಲ. ಇನಿಂಗ್ಸ್ ನ 17ನೇ ಓವರ್ ನಲ್ಲಿ ಕೇವಲ 1 ರನ್ ಬಿಟ್ಟುಕೊಟ್ಟ ಬುಮ್ರಾ, ಹೆಟ್ಮೆಯರ್ (5) ವಿಕೆಟ್ ಕಬಳಿಸಿದರು. ಬಳಿಕ 19ನೇ ಓವರ್ ನಲ್ಲಿ ಗ್ರಾಂಡ್ ಹೋಮ್ ವಿಕೆಟ್ ಕಬಳಿಸಿದ್ದಲ್ಲದೆ ಕೇವಲ 5 ರನ್ ಬಿಟ್ಟುಕೊಟ್ಟರು. ಇದರಿಂದ ಆರ್ ಸಿಬಿ ಅಂತಿಮ ಓವರ್ನಲ್ಲಿ 17 ರನ್ ಗಳಿಸುವ ಕಠಿಣ ಸವಾಲು ಪಡೆಯಿತು.