'ಐಪಿಎಲ್ ಸೋಲಿನಿಂದ ಸಾಮರ್ಥ್ಯ ಅವಹೇಳನ ಬೇಡ, ದೇಶಕ್ಕಾಗಿ ಆಡುವಾಗ ವಿರಾಟ್ ಕೊಹ್ಲಿ ಗತ್ತೇ ಬೇರೆ'

ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಮೇರೆ ವಿರಾಟ್ ಕೊಹ್ಲಿ ಸಾಮರ್ಥ್ಯವನ್ನು ಅವಹೇಳನ ಮಾಡಬೇಡಿ.. ದೇಶಕ್ಕಾಗಿ ಆಡುವಾಗ ಅವರ ಗತ್ತೇ ಬೇರೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಮೇರೆ ವಿರಾಟ್ ಕೊಹ್ಲಿ ಸಾಮರ್ಥ್ಯವನ್ನು ಅವಹೇಳನ ಮಾಡಬೇಡಿ.. ದೇಶಕ್ಕಾಗಿ ಆಡುವಾಗ ಅವರ ಗತ್ತೇ ಬೇರೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳನ್ನಾಡಿದ್ದು, ಈ ವರೆಗೂ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಆಡಿದ ಆರೂ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ನಾಯಕತ್ವವನ್ನು ಹೀಗಳೆಯುತ್ತಿದ್ದಾರೆ. ಅಲ್ಲದೆ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಮತ್ತೆ ಎಂಎಸ್ ಧೋನಿ ಅಥವಾ ರೋಹಿತ್ ಶರ್ಮಾ ಅವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಆದರೆ ಈ ಆರೋಪಗಳಿಗೆ ತಿರುಗೇಟು ನೀಡಿರುವ ಭಾರತ ತಂಡದ ಖ್ಯಾತ ಸ್ಪಿನ್ನರ್ ಕುಲದೀಪ್ ಯಾದವ್, ನಾಯಕ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಈ ಕುರಿತು ಮಾತನಾಡಿರುವ ಕುಲದೀಪ್ ಯಾದವ್, 'ಭಾರತಕ್ಕಾಗಿ ಆಡುವಾಗ ವಿರಾಟ್ ಕೊಹ್ಲಿ ಹಸಿವೇ ಬೇರೆಯದ್ದೇ ಆಗಿರುತ್ತದೆ. ಹೀಗಾಗಿ ಐಪಿಎಲ್ ಪ್ರದರ್ಶನ ವಿಶ್ವಕಪ್ ಟೂರ್ನಿ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಎಂಬ ವಾದವನ್ನು ನಾನು ನಂಬುವುದಿಲ್ಲ. ಇದು ತಂಡದ ಮೇಲೂ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಹೇಳಿದ್ದಾರೆ.
'ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ಕೊಹ್ಲಿ ಕೂಡ ಒಬ್ಬರು. ಈ ಹಿಂದೆ ಕ್ರಿಕೆಟ್ ದಂತಕಥೆಗಳು ನಿರ್ಮಿಸಿದ್ದ ಸಾಕಷ್ಟು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾರೆ. ದೇಶಕ್ಕಾಗಿ ಆಡುವಾಗ ಅವರ ಗತ್ತೇ ಬೇರೆಯದ್ದಾಗಿರುತ್ತದೆ. ಭಾರತಕ್ಕಾಗಿ ಆಡುವಾಗ ಅವರು ಬೇರೆಯದ್ದೇ ಮಾದರಿಯ ದಾಹ ಮತ್ತು ಹಸಿವನ್ನು ಹೊಂದಿರುತ್ತಾರೆ. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ವಿಫಲರಾಗಿದ್ದಾರೆ ಎಂಬವಾದವನ್ನೂನಾನು ಒಪ್ಪುವುದಿಲ್ಲ. ಏಕೆಂದರೆ ಐಪಿಎಲ್ ನಲ್ಲಿ ಕೊಹ್ಲಿ ವೈಯುಕ್ತಿಕ 5 ಸಾವಿರ ರನ್ ಗಳಿಸಿದ ಆಟಗಾರ. ಈ ಅಂಕಿ ಸಂಖ್ಯೆಯೇ ಅವರು ಈ ಮಾದರಿಯ ಕ್ರಿಕೆಟ್ ಗೆ ಎಷ್ಟು ಸಮರ್ಥರು ಎಂಬುದನ್ನು ತೋರಿಸುತ್ತದೆ. ಬಹುಶಃ ತಂಡ ಸಂಯೋಜನೆ ಕೈಕೊಟ್ಟಿರ ಬಹುದು. ಇದಕ್ಕಾಗಿ ಅವರ ಸಾಮರ್ಥ್ಯವನ್ನು ಹೀಗಳೆಯುವುದು ಸರಿಯಲ್ಲ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.
ಅಂತೆಯೇ ಯಾವುದೇ ಕ್ಷಣದಲ್ಲಿ ಪಂದ್ಯದ ಫಲಿತಾಂಶವನ್ನೇ ಬದಲಿಸಿ ಬಿಡುವ ತಾಕತ್ತು ಕೊಹ್ಲಿಗಿದೆ. ಅವರ ಪ್ರದರ್ಶನ ಹೀಗೆಯೇ ಮುಂದುವರೆದರೆ ವಿಶ್ವಕಪ್ ನಲ್ಲಿ ಭಾರತಕ್ಕೆ ನೆರವಾಗಲಿದೆ. ಐಪಿಎಲ್ ಹೊರತಾಗಿಯೂ ಎಲ್ಲ ಆಟಗಾರರೂ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ಉತ್ಸುಕರಾಗಿದ್ದಾರೆ ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com