ಕಿವೀಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್; ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ!

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯಾ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಪಾಂಡ್ಯಾ ಸಿಕ್ಸರ್
ಪಾಂಡ್ಯಾ ಸಿಕ್ಸರ್
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯಾ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ವೆಲ್ಲಿಂಗ್ಟನ್ ನಲ್ಲಿ ನಡೆದ ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಏಕಪಂದ್ಯದಲ್ಲಿ ಭಾರತ ತಂಡ 35 ರನ್ ಗಳ ಭರ್ಜರಿ ಗೆಲುವು ದಾಖಲಿಸಿತಾದರೂ, ಒಂದು ಹಂತದಲ್ಲಿ 4ನೇ ಪಂದ್ಯದಂತೆ ಈ ಪಂದ್ಯದಲ್ಲೂ ಭಾರತ ತಂಡ ಹೀನಾಯ ಸೋಲುವ ಕಾಣವು ಸಾದ್ಯತೆ ಇತ್ತು. ಕೇವಲ 18 ರನ್ ಗಳಿಗೆ ಭಾರತದ ಘಟಾನುಘಟಿ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್, ಶುಭ್ ಮನ್ ಗಿಲ್ ಹಾಗೂ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕಳೆದುಕೊಂಡ ಭಾರತ ಹೀನಾಯ ಸ್ಥಿತಿಯಲ್ಲಿತ್ತು. ಆದರೆ  ಈ ವೇಳೆ ಎಚ್ಚರಿಕೆಯ ಆಟವಾಡಿದ ಅಂಬಾಟಿ ರಾಯುಡು (90) ಮತ್ತು ವಿಜಯ್ ಶಂಕರ್ (45) ತಂಡಕ್ಕೆ ಆಸರೆಯಾದರು. ಇನ್ನು ಕೊನೆಯಲ್ಲಿ ಅಬ್ಬರಿಸುವ ಮೂಲಕ ಯುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ​ ತಂಡದ ಮೊತ್ತವನ್ನು 250 ರ ಗಡಿ ದಾಟಿಸಿದರು.
ಕೇವಲ 22 ಎಸೆತಗಳಲ್ಲಿ 45 ರನ್ ಗಳನ್ನು ಸಿಡಿಸಿದ ಪಾಂಡ್ಯ ಹೊಸ ದಾಖಲೆ ಬರೆದರು. ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ನ್ಯೂಜಿಲೆಂಡ್ ನ ಟಾಡ್ ಆ್ಯಸ್ಟಲ್ ಬೌಲಿಂಗ್ ನಲ್ಲಿ ಸತತ ಮೂರು ಭರ್ಜರಿ ಸಿಕ್ಸರ್​ ಸಿಡಿಸಿ ಪಾಂಡ್ಯ ಅಬ್ಬರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 4 ಬಾರಿ ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸಿದ ದಾಖಲೆಯನ್ನು ಪಾಂಡ್ಯಾ ಸರಿಗಟ್ಟಿದರು. ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎಬಿಡಿ ಡಿವಿಲಿಯರ್ಸ್ ಕೂಡ ಈ ಹಿಂದೆ 4 ಬಾರಿ ಹ್ಯಾಟ್ರಿಕ್ ಸಿಕ್ಸರ್​ ಸಿಡಿಸಿದ್ದಾರೆ.
ಇನ್ನು ಪಾಂಡ್ಯಾ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಇಮಾದ್ ವಾಸೀಂ ಹಾಗೂ ಶಾಬಾದ್ ಖಾನ್ ಬೌಲಿಂಗ್​ನಲ್ಲಿ ಈ ಮೊದಲು ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದ್ದರು. ಹಾಗೆಯೇ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಆ್ಯಡಂ ಝಂಪಾ ಬೌಲಿಂಗ್ ನಲ್ಲೂ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಅಲ್ಲದೆ ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಪುಷ್ಪಕುಮಾರ ಬೌಲಿಂಗ್ ನಲ್ಲೂ ಹಾರ್ದಿಕ್​ ಪಾಂಡ್ಯ ಹ್ಯಾಟ್ರಿಕ್ ಸಿಕ್ಸರ್​ ಸಿಡಿಸಿದ್ದರು. ಈ ಮೂಲಕ ಕ್ರಿಕೆಟ್​ ತಮ್ಮ ಕೆರಿಯರ್​ನಲ್ಲಿ ಒಟ್ಟು 5 ಬಾರಿ ಹ್ಯಾಟ್ರಿಕ್​ ಸಿಕ್ಸರ್​​ ಬಾರಿಸಿದ ಏಕೈಕ ಭಾರತದ ಆಟಗಾರ ಎಂಬ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com