ಭಾರತದ ವಿರುದ್ಧ ಸೋಲು: ಇಡೀ ತಂಡದ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಪಾಕ್ ಆಟಗಾರ ಕಮ್ರಾನ್ ಅಕ್ಮಲ್

ಹಾಲಿ ವಿಶ್ವಕಪ್ ನಲ್ಲಿನ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ, ಅದರಲ್ಲೂ ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನೀಯರಿಗೆ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿ ಮಾರ್ಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಹಾಲಿ ವಿಶ್ವಕಪ್ ನಲ್ಲಿನ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ, ಅದರಲ್ಲೂ ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನೀಯರಿಗೆ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿ ಮಾರ್ಪಟ್ಟಿದೆ. 
ಪಂದ್ಯ ನಡೆದು ಐದು ದಿನಗಳೇ ಗತಿಸಿ ಹೋದರೂ ಅದರ ಪರಿಣಾಮ ಪಾಕಿಸ್ತಾನದಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಈ ಹಿಂದೆ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಈ ವಿಚಾರವಾಗಿ ಮಾತನಾಡಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಮತ್ತೋರ್ವ ಹಿರಿಯ ಆಟಗಾರ ಕಮ್ರಾನ್ ಅಕ್ಮಲ್ ಕೂಡ ಪಾಕಿಸ್ತಾನ ತಂಡವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇಡೀ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮನವಿ ಮಾಡಿದ್ದಾರೆ.
'ಹಾಲಿ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ ಪಾಕಿಸ್ತಾನ ಕ್ರಿಕೆಟ್ ಗೆ ಅಪಾರ ಪ್ರಮಾಣದ ನಷ್ಟ ಉಂಟುಮಾಡಿದೆ. ಪಾಕಿಸ್ತಾನ ತಂಡದಿಂದ ಪಾಕ್ ಕ್ರಿಕೆಟ್ ಗೆ ಭಾರಿ ಮುಖಭಂಗವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಗೌರವಕ್ಕೆ ಧಕ್ಕೆಯಾಗಿದೆ. ಹೀಗಾಗಿ ಹಾಲಿ ತಂಡದ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.
ಅಂತೆಯೇ 'ಪಾಕಿಸ್ತಾನ ಹತ್ತಾರು ಅತ್ಯುತ್ತಮ ಕ್ರಿಕೆಟಿಗರನ್ನು ಹೊಂದಿದೆ. ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವು ಲೆಜೆಂಡ್ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಘನತೆಯನ್ನು ಹೆಚ್ಚಿಸಿದ್ದಾರೆ. ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಕೌಶಲ್ಯದಿಂದ ಪಾಕಿಸ್ತಾನ ವಿಶ್ವದ ಬಲಿಷ್ಟ ತಂಡಗಳಲ್ಲಿ ಒಂದಾಗಿರುವಂತೆ ನೋಡಿಕೊಂಡಿದ್ದಾರೆ. ಈ ವರೆಗೂ ವಿಶ್ವಕಪ್ ನಲ್ಲಿ ಚೇಸಿಂಗ್ ಮಾಡಿ ಪಾಕಿಸ್ತಾನ ಗೆದ್ದ ಉದಾಹರಣೆಯೇ ಇಲ್ಲ. ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಏಕೈಕ ಗೆಲುವು ಸಾಧಿಸಿದ್ದು, ಅದೂ ಕೂಡ ಮೊದಲು ಬ್ಯಾಟಿಂಗ್ ಮಾಡಿದ್ದಾಗಲೇ.. ಹೀಗಿರುವಾಗ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅದ್ಯಾವ ಲೆಕ್ಕಾಚಾರದಲ್ಲಿ ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಇದು ಖಂಡಿತಾ ತಂಡದ ಸ್ವಯಂಕೃತ ಅಪರಾಧವಾಗಿದೆ ಎಂದು ಅಕ್ಮಲ್ ಹೇಳಿದ್ದಾರೆ.
ಇನ್ನು ಭಾರತದ ವಿರುದ್ಧ ಸೋಲು ಪಾಕಿಸ್ತಾನ ಕ್ರಿಕೆಟ್ ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದ್ದು, ಈಗಾಗದಲೇ ತಂಡದ ಕೋಚ್ ಮಿಕ್ಕಿ ಆರ್ಥರ್ ಸ್ಥಾನಕ್ಕೆ ಕುತ್ತು ಬಂದಿದೆ. ಅಷ್ಟು ಮಾತ್ರವಲ್ಲದೇ ಇಂಜಮಾಮ್ ಉಲ್ ಹಕ್ ಅವರ ಆಯ್ಕೆ ಸಮಿತಿಯಲ್ಲೂ ಬದಲಾವಣೆ ಮಾಡಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com