

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಇದರಿಂದ ಜಗತ್ತಿನ ಹಲವು ಕ್ರಿಕೆಟ್ ಮಂಡಳಿಗಳು ದಿವಾಳಿಯಾಗುವ ಭೀತಿಯಲ್ಲಿದ್ದು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಮಾತ್ರ ಸೇಫ್ ಆಗಿದೆ.
ಜಗತ್ತಿನಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಳೆದ ಒಂದು ತಿಂಗಳಿನಿಂದ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆದಿಲ್ಲ. ಇನ್ನು ಈ ವರ್ಷದ ಅಂತ್ಯದವರೆಗೂ ಯಾವುದೇ ಕ್ರಿಕೆಟ್ ಟೂರ್ನಿಗಳು ನಡೆಯುವುದು ಅನುಮಾನ.
ಇದರಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಂಥ ಹಲವು ಕ್ರಿಕೆಟ್ ಮಂಡಳಿಗಳು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಆದರೆ ಬಿಸಿಸಿಐ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳೂ ಮಾತ್ರ ಈ ಹೊಡೆತವನ್ನು ಸಮರ್ಥವಾಗಿ ಎದುರಿಸಲಿವೆ.
ಭಾರತದ ಹೊಡೆತಕ್ಕೆ ಪಿಸಿಬಿ ಠುಸ್!
ಪಾಕ್ ವಿರುದ್ಧದ ರಾಜತಾಂತ್ರಿಕ ಸಂಬಂಧಗಳು ಹಳಸಿದ್ದರಿಂದ 2008ರಿಂದ ಇಲ್ಲಿಯವರೆಗೂ ಭಾರತ ಮತ್ತು ಪಾಕ್ ನಡುವೆ ಯಾವುದೇ ದ್ವಿಪಕ್ಷೀಯ ಟೂರ್ನಿಗಳು ನಡೆದಿಲ್ಲ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬರೋಬ್ಬರಿ 690 ಕೋಟಿ ನಷ್ಟ ಅನುಭವಿಸಿದೆ.