
ಬೆಂಗಳೂರು: ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಸಿದ ಭರ್ಜರಿ ಸಿಕ್ಸರ್ ವೊಂದು ಆರ್ ಸಿಬಿ ಗೆಲುವಿಗೆ ಕಾರಣವಾಯಿತು ಎಂದರೆ ನೀವು ನಂಬುತ್ತಿರೀ.. ಅಚ್ಚರಿಯಾದ್ರೂ ಇದು ಸತ್ಯ... ಇದನ್ನು ಸ್ವತಃ ಆರ್ ಸಿಬಿಯ ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 27 ರನ್ಗಳಿಂದ ಗೆದ್ದುಕೊಂಡಿತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ ಆರ್ಸಿಬಿ ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು. ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು 201 ರನ್ ಗಳಿಸಿದ್ದರೂ ಸಾಕಿತ್ತು, ಪಂದ್ಯ ಸೋತರೂ ಪ್ಲೇಆಫ್‌ಗೆ ಅವಕಾಶ ಪಡೆಯುತ್ತಿದ್ದರು. ಆದರೆ, ಅದ್ಭುತ ಸಾಂಘಿಕ ಪ್ರದರ್ಶನ ನೀಡಿದ ಆರ್ ಸಿಬಿ ಸಿಎಸ್‌ಕೆ ತಂಡವನ್ನು 191 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಪಂದ್ಯವನ್ನು ಗೆದ್ದಿದ್ದು ಮಾತ್ರವಲ್ಲದೆ, ಪ್ಲೇಆಫ್‌ಗೂ ಪ್ರವೇಶ ಪಡೆದುಕೊಂಡಿತು.
ಆರ್ ಸಿಬಿ ಗೆಲುವಿಗೆ ಕಾರಣವಾದ ಧೋನಿ ಸಿಕ್ಸರ್!
ಸಿಎಸ್‌ಕೆ ಪ್ಲೇಆಫ್‌ಗೆ ಪ್ರವೇಶ ಪಡೆಯಲು ಕೊನೆಯ ಓವರ್ ನಲ್ಲಿ 17 ರನ್ ಬೇಕಿತ್ತು, ಯಶ್ ದಯಾಳ್ ಮೊದಲ ಎಸೆತವನ್ನೇ ಎಂಎಸ್ ಧೋನಿ ಸಿಕ್ಸರ್ ಬಾರಿಸುವ ಮೂಲಕ ಆರ್ ಸಿಬಿ ತಂಡದ ಗೆಲುವಿನ ಆಸೆಯನ್ನೇ ಕಸಿದುಕೊಂಡಿದ್ದರು. ಧೋನಿ ಹೊಡೆದ ಆ ಸಿಕ್ಸ್ ಮೈದಾನದಿಂದ ಆಚೆ ಹೋಯಿತು, ಬಳಿಕ ಹೊಸ ಚೆಂಡನ್ನು ಬೌಲರ್ ಗೆ ನೀಡಲಾಯಿತು.
ಮುಂದಿನ ಎಸೆತದಲ್ಲೇ ಯಶ್ ದಯಾಳ್ ಧೋನಿ ಅವರನ್ನು ಔಟ್ ಮಾಡುವ ಮೂಲಕ ಆರ್ ಸಿಬಿಗೆ ಮರುಜೀವ ನೀಡಿದರು. ಬಳಿಕ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ನೀಡುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ಪಂದ್ಯದ ಬಳಿಕ ಆರ್ ಸಿಬಿ ಡ್ರೆಸ್ಸಿಂಗ್ ರೂಂನಲ್ಲಿ ಮಾತನಾಡಿದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಂಎಸ್ ಧೋನಿ ಅಷ್ಟು ದೂರ ಸಿಕ್ಸರ್ ಬಾರಿಸಿದ್ದು ನಮಗೆ ಸಹಾಯವಾಯಿತು ಎಂದರು. ''ಮಂಜು ಬೀಳುತ್ತಿದ್ದ ಕಾರಣ ಚೆಂಡು ಒದ್ದೆಯಾಗಿದ್ದು, ಬೌಲರ್ ಗಳು ಬೇಕಾದಂತೆ ಬೌಲರ್ ಮಾಡಲು ಕಷ್ಟಪಡುತ್ತಿದ್ದರು. ಆದರೆ ಧೋನಿ ಮೈದಾನದಿಂದ ಹೊರಗೆ ಚಂಡನ್ನು ಕಳುಹಿಸಿದ ಕಾರಣ ಬೇರೆ ಬಾಲ್ ನೀಡಲಾಯಿತು. ಅದರಿಂದ ಯಶ್ ದಯಾಳ್ ಅವರು ತಾವಂದುಕೊಂಡಂತೆ ಬೌಲಿಂಗ್ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
Advertisement