
ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಷ್ ಮುಖಭಂಗ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಸೋಲು ಇದೀಗ ಹತ್ತು ಹಲವು ವಿಚಾರಗಳನ್ನು ಮುನ್ನೆಲೆಗೆ ತಂದಿದೆ. ಸತತ ಸೋಲುಗಳ ನಂತರ ಬಿಸಿಸಿಐ BCCI ಭಾರತ ಕ್ರಿಕೆಟ್ ತಂಡದ ಆಟಗಾರರ ಮೇಲೆ ಕೆಲವು ನಿರ್ಬಂಧಗಳನ್ನು ಹೇರುವ ನಿರ್ಧಾರಕ್ಕೆ ಬಂದಿದೆ. ಟೀಂ ಇಂಡಿಯಾ ಆಟಗಾರರು ವಿದೇಶಗಳಿಗೆ ತೆರಳಿದ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ನೀಡಲಾಗಿದ್ದ ಅವಕಾಶವನ್ನು ಕಸಿದುಕೊಳ್ಳಲು ಮತ್ತು ಪೂರ್ವ ಕೋವಿಡ್ ನಿಯಮವನ್ನು ಮರು ಜಾರಿಗೊಳಿಸಲು ಬಿಸಿಸಿಐ ಯೋಜಿಸುತ್ತಿದೆ ಎನ್ನಲಾಗಿದೆ.
ಸರಣಿ ಸೋಲುಗಳ ಬಳಿಕ ಬಿಸಿಸಿಐ ಜೊತೆಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ನಡೆದ ಪರಿಶೀಲನಾ ಸಭೆಯಲ್ಲಿ ಗಂಭೀರ್ ಅವರು ತಂಡದೊಳಗಿನ ಅಶಿಸ್ತನ್ನು ನಿವಾರಿಸಬೇಕು ಎಂದು ಹೇಳಿದ ನಂತರ ಈ ಬದಲಾವಣೆಗಳನ್ನು ಮಾಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ವರದಿಯಾಗಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಸದ್ಯದ ಟೀಂ ಇಂಡಿಯಾ ಸಾಕಷ್ಟು ಅಶಿಸ್ತಿನಿಂದ ಕೂಡಿದೆ. ಇದನ್ನು ತೊಡೆದುಹಾಕಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದಿದ್ದರು. ಹೀಗಾಗಿ, ಬಿಸಿಸಿಐ ಪೂರ್ವ ಕೋವಿಡ್ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈವರೆಗೂ ಟೀಂ ಇಂಡಿಯಾ ಆಟಗಾರರು ಸರಣಿಗಾಗಿ ವಿದೇಶಗಳಿಗೆ ತೆರಳಿದಾಗ ಕುಟುಂಬದ ಸದಸ್ಯರನ್ನು ಕರೆದುಕೊಂಡು ಹೋಗಲು, ಜೊತೆಯಲ್ಲಿ ತಂಗಲು ಅವಕಾಶ ನೀಡಲಾಗಿತ್ತು. ಇದೀಗ ಆ ಸವಲತ್ತನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಹೊಸ ನಿಯಮದ ಪ್ರಕಾರ, ಟೀಂ ಇಂಡಿಯಾದ ಆಟಗಾರರು ವಿದೇಶ ಪ್ರವಾಸದ ವೇಳೆ ಎರಡು ವಾರ ಮಾತ್ರ ಕುಟುಂಬದ ಸದಸ್ಯರ ಜೊತೆಗಿರಲು ಅವಕಾಶ ಮಾಡಿಕೊಡುತ್ತದೆ.
ಸಭೆಯಲ್ಲಿ ಹಾಜರಿದ್ದ ಭಾರತ ತಂಡದ ಹಿರಿಯ ಆಟಗಾರರೊಬ್ಬರು, ಪಂದ್ಯ ಶುಲ್ಕವನ್ನು ಆಟಗಾರರಿಗೆ ತಕ್ಷಣವೇ ವಿತರಿಸಬಾರದು. ಬದಲಿಗೆ, ಕೆಲವು ಆಟಗಾರರು ದೇಶೀಯ ಮತ್ತು ರಾಷ್ಟ್ರೀಯ ತಂಡದ ಬದ್ಧತೆಗೆ ಆದ್ಯತೆ ನೀಡದ ಕಾರಣ, ಶುಲ್ಕವನ್ನು ವಿತರಿಸುವ ಮೊದಲು ಆಟಗಾರರ ಪ್ರದರ್ಶನವನ್ನು ಪರಿಗಣಿಸಬೇಕು ಎಂದು ಬಿಸಿಸಿಐಗೆ ಸೂಚಿಸಿದ್ದಾರೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಭಾರತ ತಂಡವು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಸಮಯದಲ್ಲಿ ಕೇವಲ ಒಂದು ಅಧಿಕೃತ ಟೀಂ ಡಿನ್ನರ್ ಆಗಿದೆ. ತಂಡವಾಗಿ ಎಲ್ಲರೂ ಒಟ್ಟಿಗೆ ಸಮಯ ಕಳೆಯುವ ಬದಲು, ಆಟಗಾರರು ಆಗಾಗ್ಗೆ ಸಣ್ಣ ಗುಂಪುಗಳಲ್ಲಿ ಹೊರಗೆ ಹೋಗುತ್ತಿದ್ದರು. ಇದು ಮುಖ್ಯ ಕೋಚ್ ಆಗಿರುವ ಗಂಭೀರ್ ಅವರಿಗೆ ಇಷ್ಟವಾಗಿರಲಿಲ್ಲ.
ಬಿಸಿಸಿಐ ಕೇವಲ ಆಟಗಾರರಿಗೆ ಮಾತ್ರ ನಿಯಮ ಬದಲಾವಣೆಗಳನ್ನು ಪ್ರಸ್ತಾಪಿಸುತ್ತಿಲ್ಲ. ಇನ್ಮುಂದೆ ತಂಡ ತಂಗಿರುವ ಹೋಟೆಲ್ ಅಥವಾ ವಿಐಪಿ ಬಾಕ್ಸ್‌ನಲ್ಲಿ ಉಳಿಯದಂತೆ ಕೋಚ್ ಗಂಭೀರ್ ಅವರ ವೈಯಕ್ತಿಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ. ಗಂಭೀರ್ ಅವರ ವೈಯಕ್ತಿಕ ಸಹಾಯಕನ ಸವಲತ್ತುಗಳನ್ನು ಸಹ ಬಿಸಿಸಿಐ ಕಸಿದುಕೊಂಡಿದೆ.
Advertisement