IPL 2025: 'ನೀನು ಮತ್ತೆ ಸಿಗು'; ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್‌ರನ್ನು ತರಾಟೆಗೆ ತೆಗೆದುಕೊಂಡ ವಿರಾಟ್ ಕೊಹ್ಲಿ!

ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಂದು ವಿರಾಟ್ ಕೊಹ್ಲಿ ಹೇಳಿದ್ದ ಮಾತು ನಿಜವಾಗಿದೆ. 36 ವರ್ಷದ ಖಲೀಲ್ ಆರ್‌ಸಿಬಿ ಇನಿಂಗ್ಸ್‌ನ ಮೂರನೇ ಓವರ್‌ನ ಎಸೆತದಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿಕೊಂಡರು.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ 2025ರ ಆವೃತ್ತಿಯಲ್ಲಿ ಆರನೇ ಅರ್ಧಶತಕ ಬಾರಿಸಿ ಮಿಂಚಿದರು. ಈ ಹಣಾಹಣಿಯಲ್ಲಿ ಆರ್‌ಸಿಬಿ ತಂಡ ಎರಡು ರನ್‌ಗಳ ರೋಚಕ ಜಯ ಸಾಧಿಸಿತು. ಪವರ್‌ಪ್ಲೇನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕೊಹ್ಲಿ, ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್ ಅವರ ಎಸೆತದಲ್ಲಿ ಸತತ ಸಿಕ್ಸರ್‌ ಸಿಡಿಸುವ ಮೂಲಕ ತಿರುಗೇಟು ನೀಡಿದರು. ಈ ಆವೃತ್ತಿಯ ಆರಂಭದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ನಡೆದ ವಾಗ್ವಾದದ ಸಂದರ್ಭದಲ್ಲಿ ಖಲೀಲ್‌ಗೆ ಎಚ್ಚರಿಕೆ ನೀಡಿದ್ದಂತೆಯೇ, ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಮಾರ್ಚ್ 28 ರಂದು ನಡೆದ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಮೊದಲ ಪಂದ್ಯದಲ್ಲಿ ವೇಗಿ ಖಲೀಲ್ ಅಹ್ಮದ್, ಔಟ್ ಎಂದು ಘೋಷಿಸುವ ಮುನ್ನವೇ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದೆ ಎಂದು ಆಚರಣೆಗೆ ಮುಂದಾಗಿದ್ದರು. ಆದರೆ, ಅವರು ಔಟ್ ಆಗಿರಲಿಲ್ಲ. ಇದನ್ನು ನಾನು ಒಪ್ಪುವುದಿಲ್ಲ. ಮುಂದಿನ ಬಾರಿ ಭೇಟಿಯಾದಾಗ ಮೈದಾನದಲ್ಲಿಯೇ ನಿನಗೆ ತಕ್ಕ ಉತ್ತರ ನೀಡುತ್ತೇನೆ ಎಂದು ವಿರಾಟ್ ಕೊಹ್ಲಿ ಖಲೀಲ್ ಅಹ್ಮದ್‌ಗೆ ಎಚ್ಚರಿಸಿದ್ದರಂತೆ.

'ಅಬ್ ತು ಆ (ನೀನು ಮತ್ತೊಮ್ಮೆ ಸಿಗು)' ಎಂದು ಕೊಹ್ಲಿ ಖಲೀಲ್‌ಗೆ ಹೇಳಿದ್ದರು, ಮುಂದಿನ ಬಾರಿ ಮುಖಾಮುಖಿಯಾದಾಗ ಈ ಸಂಭ್ರಮಾಚರಣೆಗೆ ನಿನಗೆ ಅವಕಾಶವೇ ನೀಡುವುದಿಲ್ಲ ಎಂದು ವೇಗಿಗೆ ಹೇಳಿದ್ದರು.

ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಂದು ವಿರಾಟ್ ಕೊಹ್ಲಿ ಹೇಳಿದ್ದ ಮಾತು ನಿಜವಾಗಿದೆ. 36 ವರ್ಷದ ಖಲೀಲ್ ಆರ್‌ಸಿಬಿ ಇನಿಂಗ್ಸ್‌ನ ಮೂರನೇ ಓವರ್‌ನ ಎಸೆತದಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿಕೊಂಡರು.

ಖಲೀಲ್‌ಗೆ ಇದು ಮರೆಯಲಾಗದ ದಿನವಾಗಿತ್ತು. ಪವರ್‌ಪ್ಲೇನಲ್ಲಿ ಅವರ ಎರಡು ಓವರ್‌ಗಳಲ್ಲಿ, ಕೊಹ್ಲಿ ಮತ್ತು ಜೇಕಬ್ ಬೆಥೆಲ್ ಅವರು 32 ರನ್‌ ಗಳಿಸಿದರು. ಆದಾಗ್ಯೂ, ಕೊನೆಯಲ್ಲಿ ಆರ್‌ಸಿಬಿ ಫಿನಿಷರ್ ರೊಮಾರಿಯೊ ಶೆಫರ್ಡ್ ಅವರು ಖಲೀಲ್ ಅವರ ಎಸೆತದಲ್ಲಿ ಒಂದು ಓವರ್‌ನಲ್ಲಿ 33 ರನ್‌ಗಳನ್ನು ಹೊಡೆದು ಐಪಿಎಲ್ 2025ರಲ್ಲಿ ಅತ್ಯಂತ ದುಬಾರಿ ಓವರ್ ಆಗಿ ಮಾಡಿದರು.

ಖಲೀಲ್ ಅವರ ಈ ಓವರ್‌ನಲ್ಲಿ ಶೆಫರ್ಡ್ ನಾಲ್ಕು ಸಿಕ್ಸರ್‌ ಮತ್ತು ಎರಡು ಬೌಂಡರಿ ಬಾರಿಸಿದರು. 14 ಎಸೆತಗಳಲ್ಲಿ 53 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಜಂಟಿ ಎರಡನೇ ವೇಗದ ಅರ್ಧಶತಕ ಗಳಿಸಿದರು.

ಶೆಫರ್ಡ್ ಅವರ ಈ ಆಕರ್ಷಕ ಅರ್ಧಶತಕವು ಆರ್‌ಸಿಬಿಯನ್ನು 200 ರನ್‌ಗಳ ಗಡಿ ದಾಟಲು ನೆರವಾಯಿತು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್ ಗುರಿ ತಲುಪುವಂತೆ ಮಾಡಿತು.

ತಮ್ಮ ತಂಡದ ಕಳಪೆ ಫಾರ್ಮ್ ಹೊರತಾಗಿಯೂ ಖಲೀಲ್ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಡಿರುವ 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಐಪಿಎಲ್ 2025 ರಲ್ಲಿ ಆರ್‌ಸಿಬಿ ತವರಿನಿಂದ ಹೊರಗೆ ಆರಕ್ಕೆ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com