
ಮುಂಬೈ: ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಮುಖೇಶ್ ಕುಮಾರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದಂಡ ವಿಧಿಸಿದೆ.
ಕ್ರಿಕೆಟ್ ಉಪಕರಣಗಳು ಅಥವಾ ಮೈದಾನದ ಫಿಕ್ಚರ್‌ಗಳ ದುರುಪಯೋಗಕ್ಕೆ ಸಂಬಂಧಿಸಿದ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧಕ್ಕಾಗಿ ಮುಖೇಶ್ ಕುಮಾರ್ ಅವರಿಗೆ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
'ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಮಾಡಿರುವುದಾಗಿ ಮುಖೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ ಮತ್ತು ಮ್ಯಾಚ್ ರೆಫರಿಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ' ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಸೂರ್ಯಕುಮಾರ್ ಯಾದವ್ ಅವರ ಅಜೇಯ 73 ರನ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್‌ಗಳ ಅಂತರದ ಗೆಲುವು ಸಾಧಿಸಿತು. ಈ ಮೂಲಕ ನಾಲ್ಕನೇ ಮತ್ತು ಅಂತಿಮ ಪ್ಲೇ-ಆಫ್ ಸ್ಥಾನವನ್ನು ಮುಂಬೈ ತಂಡ ಖಚಿತಪಡಿಸಿಕೊಂಡಿತು.
ಸೂರ್ಯಕುಮಾರ್ ಅವರ 43 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಅದ್ಭುತ ಪ್ರದರ್ಶನವು ತಂಡದ ಗೆಲುವಿಗೆ ದಾರಿ ಮಾಡಿಕೊಟ್ಟಿತು. ಐದು ಬಾರಿ ಚಾಂಪಿಯನ್ ಆಗಿರುವ ತಂಡ ಕಳೆದ ವರ್ಷ ಪ್ಲೇ-ಆಫ್‌ಗೆ ಅರ್ಹತೆ ಪಡೆದಿರಲಿಲ್ಲ.
ಮುಂಬೈ ನೀಡಿದ 181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 18.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಯಿತು. ಅಕ್ಷರ್ ಪಟೇಲ್ ಈ ಪಂದ್ಯದಿಂದ ಹೊರಗುಳಿದಿದ್ದರು. ಈ ಸೋಲಿನಿಂದ ಡೆಲ್ಲಿ ತಂಡ ಇದೀಗ ಪ್ಲೇಆಫ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ಇನ್ನೊಂದು ಪಂದ್ಯದಲ್ಲಿ ಸೆಣಸಲಿದೆ.
Advertisement