

ನವದೆಹಲಿ: ಇಂಗ್ಲೆಂಡ್ ಮತ್ತು ಐರ್ಲೆಂಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು ಕಂಡಿರುವ ಭಾರತ ತಂಡಕ್ಕೆ ಮೇಜರ್ ಸರ್ಜರಿ ಮಾಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐ ಮಹತ್ವ ರೀವ್ಯೂ ಮೀಟಿಂಗ್ ಕರೆದಿದೆ.
ಹೌದು.. ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲು ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಕಂಗೆಡುವಂತೆ ಮಾಡಿದ್ದು, ಆಟಗಾರರು ಮಾತ್ರವಲ್ಲ ತಂಡದ ಸಿಬ್ಬಂದಿ ವರ್ಗದ ಪ್ರದರ್ಶನದ ಪರಿಶೀಲನೆಗೆ ಬಿಸಿಸಿಐ ಮಹತ್ವದ ಸಭೆ ಕರೆದಿದೆ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ಸೋಲು ಅನುಭವಿಸಿದ ಬೆನ್ನಲ್ಲೇ, ತಂಡದ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರಿಶೀಲಿಸಲು ಮುಂದಾಗಿದೆ.
ಬ್ರಿಸ್ಟಲ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿನ ಸೋಲಿನ ಬಳಿಕ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಬಿಸಿಸಿಐ ಮೌಲ್ಯಮಾಪನ ಮಾಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕೋಚ್ ಗೌತಮ್ ಗಂಭೀರ್ ಮೇಲೂ ತೂಗುಗತ್ತಿ
ಈ ಬಾರಿ ಆಟಗಾರರು ಮಾತ್ರವಲ್ಲದೇ ತಂಡದ ಸಹಾಯಕ ಸಿಬ್ಬಂದಿಗಳ ಮೇಲೂ ಬಿಸಿಸಿಐ ಕೆಂಗಣ್ಣು ಬೀರಿದೆ ಎನ್ನಲಾಗಿದೆ. ಮುಖ್ಯವಾಗಿ ತಂಡದ ಕೋಚ್ ಗೌತಮ್ ಗಂಭೀರ್ ಅವರ ಕುರಿತು ಬಿಸಿಸಿಐ ತೃಪ್ತಿ ಹೊಂದಿಲ್ಲ. ಗೌತಮ್ ಗಂಭೀರ್ ಅವರ ಒಪ್ಪಂದವು 2027ರವರೆಗೆ ಇದ್ದರೂ, ತಂಡದ ಇತ್ತೀಚಿನ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರ ಪಾತ್ರವೂ ಪರಿಶೀಲನೆಗೆ ಒಳಪಡಲಿದೆ ಎಂದು ಮೂಲಗಳು ತಿಳಿಸಿವೆ.
ಸತತ ಸೋಲು
ಹೊಸ ನಾಯಕನಾಗಿ ನೇಮಕಗೊಂಡಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ, ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಒಂಬತ್ತು ವಿಕೆಟ್‌ಗಳ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 3-0ರ ಅಜೇಯ ಮುನ್ನಡೆ ಸಾಧಿಸಿದ್ದು, ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಅಂತ್ಯಗೊಂಡಿತ್ತು.
ಎರಡನೇ ಟಿ20 ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್‌ಗಳಿಂದ ಸೋತರೆ, ಮೂರನೇ ಪಂದ್ಯದಲ್ಲಿ 202 ರನ್ ಗುರಿ ಬೆನ್ನಟ್ಟಿದ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆಗಿ 125 ರನ್‌ಗಳ ಭಾರೀ ಸೋಲು ಕಂಡಿತ್ತು. ಗಮನಾರ್ಹ ಸಂಗತಿಯೆಂದರೆ, ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಸತತ ಎರಡನೇ ಟಿ20 ಸರಣಿ ಸೋಲು ಕಂಡಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ ಭಾರತ 2-0 ಅಂತರದಿಂದ ಸೋತಿತ್ತು. ಅಲ್ಲದೆ, ಐರ್ಲೆಂಡ್ ವಿರುದ್ಧ ಭಾರತಕ್ಕೆ ಇದು ಮೊದಲ ಟಿ20 ಸರಣಿ ಸೋಲಾಗಿತ್ತು.
ಉಲ್ಟಾ ಹೊಡೆದ ನಾಯಕತ್ವ ಬದಲಾವಣೆ
ಈ ಎರಡೂ ಸರಣಿ ಸೋಲುಗಳು, 2026ರ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ನೇಮಕ ಮಾಡಿದ ನಂತರ ಸಂಭವಿಸಿರುವುದು ವಿಶೇಷ. ಹೀಗಾಗಿ ನಾಯಕತ್ವ ಬದಲಾವಣೆ ತಂಡಕ್ಕೆ ಉಲ್ಟಾ ಹೊಡೆಯಿತೇ ಎಂಬ ಪ್ರಶ್ನೆಯೂ ಮೂಡುತ್ತಿದೆ. ಯಶಸ್ವಿ ನಾಯಕನಾಗಿದ್ದ ಸೂರ್ಯ ಕುಮಾರ್ ಯಾದವ್ ರನ್ನು ಕೆಳಗಿಳಿಸಿದ್ದು ತಂಡಕ್ಕೆ ದುಬಾರಿಯಾದಂತೆ ಕಂಡುಬರುತ್ತಿದೆ.