

ಬರ್ಮಿಂಗ್ಹ್ಯಾಮ್: ಮಹಿಳಾ ಟಿ-20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮಹಿಳಾ ಟಿ-20 ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ 12 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.
ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಈ ಸ್ಪರ್ಧೆಯು ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದ್ದು, 33 ಪಂದ್ಯಗಳು ಇರಲಿದೆ. ಬಹುನಿರೀಕ್ಷಿತ ಭಾರತ- ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ.
ಭಾರತದ ಮಹಿಳಾ ಟಿ20 ವಿಶ್ವಕಪ್ 2026 ವೇಳಾಪಟ್ಟಿ ಇಂತಿದೆ:
ಜೂನ್ 14 - ಭಾರತ vs ಪಾಕಿಸ್ತಾನ (ಬರ್ಮಿಂಗ್ಹ್ಯಾಮ್), ಸಮಯ: ಸಂಜೆ 7:00 ಗಂಟೆಗೆ
ಜೂನ್ 17 - ಭಾರತ vs ನೆದರ್ಲ್ಯಾಂಡ್ಸ್ (ಲೀಡ್ಸ್)
ಜೂನ್ 21 - ಭಾರತ vs ದಕ್ಷಿಣ ಆಫ್ರಿಕಾ (ಮ್ಯಾಂಚೆಸ್ಟರ್)
ಜೂನ್ 25 - ಭಾರತ vs ಬಾಂಗ್ಲಾದೇಶ (ಮ್ಯಾಂಚೆಸ್ಟರ್)
ಜೂನ್ 28 - ಭಾರತ vs ಆಸ್ಟ್ರೇಲಿಯಾ (ಲಂಡನ್)
2009 ರಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯಾವಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ಎಂಟು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರು ಪಂದ್ಯಗಳನ್ನು ಗೆದ್ದಿರುವ ಭಾರತ ಸ್ಪಷ್ಟ ಮುನ್ನಡೆಯನ್ನು ಹೊಂದಿದ್ದರೆ, ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದೆ.
2024 ರಲ್ಲಿ ನಡೆದ ಇತ್ತೀಚಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಆರು ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಉಭಯ ತಂಡಗಳ ನಡುವಿನ ಒಟ್ಟಾರೆ ಟಿ20 ದಾಖಲೆ ಪ್ರಕಾರ ಭಾರತವೇ ಹೆಚ್ಚು ಬಾರಿ ಗೆದ್ದಿದೆ. 16 ಪಂದ್ಯಗಳಲ್ಲಿ 13 ಬಾರಿ ಜಯಗಳಿಸಿದ್ದು, ಪಾಕಿಸ್ತಾನ ಕೇವಲ ಮೂರು ಬಾರಿ ಜಯಗಳಿಸಿದೆ.
2026 ರ ಮಹಿಳಾ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಇಂತಿದೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.
ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಪಾಕಿಸ್ತಾನಗಳೊಂದಿಗೆ ಭಾರತವು ಸವಾಲಿನ ಗ್ರೂಪ್ ಎ ನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ಮಹಿಳಾ ತಂಡ ಅದ್ಬುತ ಪ್ರದರ್ಶನ ನೀಡಿದೆ. ಆದರೆ ಪ್ರಶಸ್ತಿ ಎತ್ತಿಹಿಡಿಯಲು ಸಾಧ್ಯವಾಗಿಲ್ಲ. 2020 ರ ಟಿ 20 ವಿಶ್ವಕಪ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದಿದ್ದರು. 2022 ರಲ್ಲಿ ಸೆಮಿಫೈನಲ್ ತಲುಪಿದ್ದರು. ಆದರೂ ಟ್ರೋಫಿ ಇನ್ನೂ ಸಿಕ್ಕಿಲ್ಲ.
Advertisement