

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುಲ ಐಪಿಎಲ್ 2026 ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಇದರ ನಡುವೆಯೇ ಬೆಂಗಳೂರಿನಲ್ಲಿ ನಡೆಯಬೇಕಿರುವ ಫೈನಲ್ ಪಂದ್ಯ ಬೇರೆ ಮೈದಾನಕ್ಕೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. ಈ ಹಿಂದೆ ರಾಜ್ಯದಲ್ಲಿ ನಡೆದ ಶಾಸಕರ ಐಪಿಎಲ್ ಟಿಕೆಟ್ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಠಿಣ ನಿಲುವು ತಳೆಯಲು ಮುಂದಾಗಿದ್ದು, ವಿವಾದದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವನ್ನೇ ಬೆಂಗಳೂರಿನಿಂದ ಬೇರೆ ಮೈದಾನಕ್ಕೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿದೆ.
Board of Control for Cricket in India (ಬಿಸಿಸಿಐ) ಶೀಘ್ರದಲ್ಲೇ ಐಪಿಎಲ್ 2026 ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳ ಸ್ಥಳಗಳನ್ನು ಘೋಷಿಸುವ ನಿರೀಕ್ಷೆಯಿದೆ. ಆದರೆ ಫೈನಲ್ ನಡೆಯುವ ಸ್ಥಳದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಪ್ಲೇಆಫ್ ಪಂದ್ಯಗಳನ್ನು ಪಂಜಾಬ್ ಮತ್ತು ಕರ್ನಾಟಕದ ನಡುವೆ ಹಂಚುವ ಸಾಧ್ಯತೆ ಇದೆ. ಆದರೆ ಬೆಂಗಳೂರು ಫೈನಲ್ ಆತಿಥ್ಯ ವಹಿಸುವುದಕ್ಕೆ ಕೆಲವು ಅಡೆತಡೆಗಳು ಎದುರಾಗಿವೆ ಎನ್ನಲಾಗಿದೆ.
ಬಿಸಿಸಿಐ ಮೂಲದ ಪ್ರಕಾರ, ಐಪಿಎಲ್ ಫೈನಲ್ ಪಂದ್ಯವನ್ನು ಸಾಮಾನ್ಯವಾಗಿ ಹಾಲಿ ಚಾಂಪಿಯನ್ ತಂಡದ ತವರು ನಗರದಲ್ಲಿ ಆಯೋಜಿಸುವ ಸಂಪ್ರದಾಯವಿದೆ. ಆದರೆ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಗಳು, ವಿಶೇಷವಾಗಿ ಎಂಎಲ್‌ಎ ಅಥವಾ ಶಾಸಕರಿಗೆ ಟಿಕೆಟ್ ಸಂಬಂಧಿತ ಸಮಸ್ಯೆಗಳು, ಇದಕ್ಕೆ ಅಡಚಣೆ ಉಂಟುಮಾಡುತ್ತಿವೆ ಎನ್ನಲಾಗಿದೆ.
“ಐಪಿಎಲ್ 2026 ಪ್ಲೇಆಫ್ ಮತ್ತು ಫೈನಲ್ ಸ್ಥಳಗಳನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ. ಪಂದ್ಯಗಳನ್ನು ಪಂಜಾಬ್ ಮತ್ತು ಕರ್ನಾಟಕದ ನಡುವೆ ಹಂಚುವ ಸಾಧ್ಯತೆ ಇದೆ. ಹಾಲಿ ಚಾಂಪಿಯನ್ ತಂಡದ ನಗರವೇ ಫೈನಲ್ ಆತಿಥ್ಯ ವಹಿಸಬೇಕು. ಆದರೆ ಎಂಎಲ್‌ಎ ಟಿಕೆಟ್ ಸಮಸ್ಯೆ ಬೆಂಗಳೂರಿನಲ್ಲಿ ತೊಂದರೆ ಉಂಟುಮಾಡುತ್ತಿದೆ. ಇದಕ್ಕೆ ಪರಿಹಾರ ಸಿಗದಿದ್ದರೆ, ಫೈನಲ್ ಅನ್ನು ಬೇರೆ ನಗರಕ್ಕೆ ಸ್ಥಳಾಂತರಿಸಲಾಗುತ್ತದೆ,” ಎಂದು ಮೂಲಗಳು ANI ಸುದ್ದಿಸಂಸ್ಥೆಗೆ ತಿಳಿಸಿವೆ.
ಎಂಎಲ್‌ಎ ಟಿಕೆಟ್ ಬೇಡಿಕೆ ಕುರಿತು ವಿವಾದ
ಇದಕ್ಕೂ ಮೊದಲು, ಹಾಲಿ ಚಾಂಪಿಯನ್ Royal Challengers Bengaluru (ಆರ್‌ಸಿಬಿ) ಮತ್ತು Sunrisers Hyderabad (ಎಸ್‌ಆರ್‌ಎಚ್) ನಡುವಿನ ಐಪಿಎಲ್ 2026 ಆರಂಭಿಕ ಪಂದ್ಯಕ್ಕೂ ಮುನ್ನ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಯೊಬ್ಬ ಶಾಸಕರಿಗೂ ಕನಿಷ್ಠ ಐದು ಐಪಿಎಲ್ ಟಿಕೆಟ್‌ಗಳನ್ನು ನೀಡಬೇಕು ಎಂದು ಸಲಹೆ ನೀಡಿದ್ದರು. ಆಯ್ಕೆಯಾದ ಪ್ರತಿನಿಧಿಗಳು “ವಿಐಪಿ”ಗಳಾಗಿದ್ದು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದಾದ ಬಳಿಕ, ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಡೆಯುತ್ತಿರುವ ಐಪಿಎಲ್ ಪಂದ್ಯಗಳಿಗೆ ಶಾಸಕರು ಮತ್ತು ಸಂಸದರಿಗಾಗಿ ಮೂರು ಟಿಕೆಟ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಡಿಕೆ ಶಿವಕುಮಾರ್ ಹೇಳಿಕೆಯ ನಂತರ, ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರು ಕೂಡ ಟಿಕೆಟ್ ದುರುಪಯೋಗದ ಆರೋಪಗಳನ್ನು ತಳ್ಳಿಹಾಕಿದರು. ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೇ ಬುಕ್ ಮಾಡಲಾಗುತ್ತದೆ ಮತ್ತು ಖರೀದಿಸಿದವರೇ ಪಂದ್ಯ ವೀಕ್ಷಿಸುತ್ತಾರೆ ಎಂದು ಅವರು ಹೇಳಿದರು.
ಅವರು ಮುಂದುವರೆದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಶಾಸಕರು ಅಥವಾ ಅವರ ಕುಟುಂಬ ಸದಸ್ಯರು ಮಾತ್ರ ಹಾಜರಾಗಬಹುದು ಎಂದು ಹೇಳಿದರು. ಟಿಕೆಟ್‌ಗಳಲ್ಲಿ “non-transferable” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುವುದರಿಂದ ಇತರರು ಬಳಸಲು ಸಾಧ್ಯವಿಲ್ಲ ಎಂದರು.
Advertisement