

ಮುಂಬೈ: 2025ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು. ಸತತ ಮೂರು ಸೋಲುಗಳ ನಂತರ ಕಠಿಣ ಸವಾಲುಗಳನ್ನು ಮೀರಿ ಭಾರತ ತಂಡವು ಟೂರ್ನಿಯನ್ನು ಗೆದ್ದುಕೊಂಡಿತು.
ಈ ಐತಿಹಾಸಿಕ ಗೆಲುವಿನ ಸಂಭ್ರಮದ ನಡುವೆ, ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಮತ್ತು ತಂಡದ ಹಾಲಿ ನಾಯಕಿ ಸ್ಮೃತಿ ಮಂಧನಾ ಅವರಿಗೆ ಒಂದು ವಿಶೇಷ ಅಭಿನಂದನಾ ಸಂದೇಶ ಬಂದಿತಂತೆ. ಈ ಸಂದೇಶ ಕಳುಹಿಸಿದವರು ಬೇರೆ ಯಾರೂ ಅಲ್ಲ, 2011ರಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡವನ್ನು ವಿಶ್ವಕಪ್ ವಿಜೇತರನ್ನಾಗಿ ಮುನ್ನಡೆಸಿದ ಎಂ.ಎಸ್. ಧೋನಿ ಅವರಂತೆ!
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಂಧನಾ, ವಿಶ್ವಕಪ್ ಗೆಲುವಿನ ಬಳಿಕ ಧೋನಿ ತಮಗೆ ಸಂದೇಶ ಕಳುಹಿಸಿದ್ದಾಗಿ ಬಹಿರಂಗಪಡಿಸಿದರು. ಕ್ರಿಕೆಟ್ ಮೈದಾನದ ಹೊರಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡದ ಧೋನಿ, ಮಹಿಳಾ ವಿಶ್ವಕಪ್ ಗೆದ್ದ ತಂಡಕ್ಕೆ ವೈಯಕ್ತಿಕವಾಗಿ ಸಂದೇಶ ಕಳುಹಿಸಲು ಸಮಯ ಮೀಸಲಿಟ್ಟಿದ್ದಕ್ಕೆ ಮಂಧನಾ ಸಂತಸ ವ್ಯಕ್ತಪಡಿಸಿದರು.
ವಿಶ್ವಕಪ್ ಗೆಲುವಿನ ನಂತರ ಧೋನಿ ನನಗೆ ಸಂದೇಶ ಕಳುಹಿಸಿದ್ದರು. ಅವರು ಸಾಮಾನ್ಯವಾಗಿ ಫೋನ್ ಅನ್ನು ಹೆಚ್ಚು ಬಳಸುವುದಿಲ್ಲ ಎಂಬುದು ನನಗೆ ಗೊತ್ತು. ಆದರೆ, ನಮ್ಮೆಲ್ಲರಿಗೂ ಅಭಿನಂದನೆ ತಿಳಿಸಲು ಅವರು ವಾಟ್ಸಾಪ್ ಬಳಸಿದ್ದು ನನಗೆ ತುಂಬಾ ಸಂತೋಷ ತಂದಿತು ಎಂದು ಮಂಧನಾ ಹೇಳಿದರು. ಆಗ ನಿರೂಪಕ ಹರ್ಷ ಭೋಗ್ಲೆ ಅವರು, "ನೀವು ಅವರ ನಂಬರ್ ಸೇವ್ ಮಾಡಿಕೊಂಡಿದ್ದೀರಾ?" ಎಂದು ಮಂಧನಾ ಅವರನ್ನು ಪ್ರಶ್ನಿಸಿದರು. "ಹೌದು, ನನ್ನ ಬಳಿ ಅವರ ನಂಬರ್ ಇತ್ತು," ಎಂದು ಮಂಧನಾ ಉತ್ತರಿಸಿದರು.
ಮಹಿಳಾ ತಂಡಕ್ಕೆ ಸಂದೇಶ ಕಳುಹಿಸುವುದು ಯಾಕೆ ಮುಖ್ಯವೆನಿಸಿತು?
ಬಳಿಕ ಭಾರತೀಯ ಮಹಿಳಾ ತಂಡಕ್ಕೆ ಸಂದೇಶ ಕಳುಹಿಸುವುದು ಯಾಕೆ ಮುಖ್ಯವೆನಿಸಿತು ಎಂಬುದನ್ನು ಧೋನಿ ವಿವರಿಸಿದರು. ತಂಡದಲ್ಲಿ ನನಗೆ ಬೇರೆ ಯಾರೂ ಪರಿಚಯವಿರಲಿಲ್ಲ. ಆದರೆ, ಸಂದೇಶ ತಲುಪಲೇಬೇಕೆಂದು ನಾನು ಭಾವಿಸಿದೆ. ಅದಕ್ಕೂ ಸ್ವಲ್ಪ ಮೊದಲು ನಾವು ಒಟ್ಟಿಗೆ (ಒಂದು ಜಾಹೀರಾತಿಗಾಗಿ) ಶೂಟಿಂಗ್ ಮಾಡಿದ್ದೆವು. ಹಾಗಾಗಿ, 'ಸ್ಮೃತಿಗೆ ಸಂದೇಶ ಕಳುಹಿಸೋಣ' ಎಂದುಕೊಂಡೆ. 'ತಂಡದಲ್ಲಿರುವ ಎಲ್ಲರಿಗೂ ನನ್ನ ಶುಭಾಶಯ ತಿಳಿಸಿ' ಎಂದು ಅವರಿಗೆ ಹೇಳಿದೆ ಎಂದರು.
"ಇದು ಬಹಳ ದೊಡ್ಡ ವಿಷಯ. ಇದು ಭಾರತೀಯ ಮಹಿಳಾ ಕ್ರಿಕೆಟ್‌ನ ಮುಂದಿನ ಪಯಣವನ್ನೇ ಬದಲಾಯಿಸುತ್ತದೆ." ಅವರು ದೇಶಕ್ಕಾಗಿ ದೊಡ್ಡ ಟ್ರೋಫಿಯನ್ನು ಗೆದ್ದು ತಂದಿದ್ದಲ್ಲದೆ, ಅಂದು ಈ ಯುವತಿಯರು ಮುಂದಿನ ಪೀಳಿಗೆಯ ಮಹಿಳೆಯರಿಗೆ ಕ್ರಿಕೆಟ್ ಅನ್ನು ಹೇಗೆ ನೋಡಬೇಕು ಮತ್ತು ಕ್ರಿಕೆಟ್ ಅನ್ನು ವೃತ್ತಿಯಾಗಿ ಹೇಗೆ ಪರಿಗಣಿಸಬೇಕು ಎಂಬುದಕ್ಕೆ ದಾರಿ ಮಾಡಿಕೊಟ್ಟರು ಎಂದು ಅವರು ಹೇಳಿದರು.
ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿತು. ಸೆಮಿಫೈನಲ್‌ನಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಆಗಿನ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಅವರು ಮಣಿಸಿದ್ದರು.