

ಪಾಕಿಸ್ತಾನಕ್ಕೆ ಹೋಲಿಸಿದರೆ, 2007ರ ಏಕದಿನ ವಿಶ್ವಕಪ್‌ನ ನಂತರ ಭಾರತೀಯ ಕ್ರಿಕೆಟ್ ತಂಡವು ಸಾಧಿಸಿರುವ ಪ್ರಗತಿಗೆ ಭಾರತೀಯ ಕ್ರಿಕೆಟ್ ಮಂಡಳಿಯು ತೆಗೆದುಕೊಂಡ ಸರಿಯಾದ ನಿರ್ಧಾರಗಳೇ ಕಾರಣ ಎಂದು ಮಾಜಿ ನಾಯಕ ಮೊಹಮ್ಮದ್ ಯೂಸುಫ್ ಹೇಳಿದ್ದಾರೆ. ಕೆರಿಬಿಯನ್‌ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್‌ನ ಗುಂಪು ಹಂತದಲ್ಲೇ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಹೊರಬಿದ್ದಿದ್ದವು. ಆ ಘಟನೆಯು ಈ ಸಾಂಪ್ರದಾಯಿಕ ಎದುರಾಳಿಗಳ ಪಾಲಿಗೆ ಒಂದು "ನಿರ್ಣಾಯಕ ಕ್ಷಣ"ವಾಗಿತ್ತು ಮತ್ತು ಅಲ್ಲಿಂದ ಭಾರತವು ಪಾಕಿಸ್ತಾನಕ್ಕಿಂತ ಮುಂದಕ್ಕೆ ಸಾಗಿತು ಎಂದು ಅವರು ಹೇಳಿದರು.
'ಅದು ಎರಡೂ ಕ್ರಿಕೆಟ್ ಮಂಡಳಿಗಳಿಗೆ ನಿರ್ಣಾಯಕ ಕ್ಷಣವಾಗಿತ್ತು. ಆ ನಂತರ ಭಾರತೀಯ ಮಂಡಳಿಯು ಎಂಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಿಸುವಂತಹ ಸರಿಯಾದ ನಿರ್ಧಾರ ತೆಗೆದುಕೊಂಡಿತು; ಇದಕ್ಕೆ ವ್ಯತಿರಿಕ್ತವಾಗಿ, ಪಾಕಿಸ್ತಾನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು, ಇದರಿಂದಾಗಿ ಪಾಕಿಸ್ತಾನ ಕ್ರಿಕೆಟ್ ಈಗ ಸಂಕಷ್ಟದಲ್ಲಿದೆ' ಎಂದು ಯೂಸುಫ್ ಯೂಟ್ಯೂಬ್ ಪಾಡ್‌ಕ್ಯಾಸ್ಟ್ ಒಂದರಲ್ಲಿ ಹೇಳಿದ್ದಾರೆ.
'ಭಾರತದ ಯಶಸ್ಸಿಗೆ ಮಾಜಿ ನಾಯಕ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಜೂನಿಯರ್ ಕ್ರಿಕೆಟ್ ಅನ್ನು ನಿರ್ವಹಿಸಿದ ರೀತಿಯೂ ಕಾರಣವಾಗಿದೆ; ಆಟಗಾರರನ್ನು ಗುರುತಿಸಲು ಮತ್ತು ಅವರನ್ನು ಉತ್ತಮವಾಗಿ ರೂಪಿಸಲು ಅವರು ಕಳೆದ ಹಲವು ವರ್ಷಗಳಲ್ಲಿ ಮಾಡಿದ ಶ್ರಮವು ಈಗ ಫಲ ನೀಡಿದೆ' ಎಂದು ಅವರು ತಿಳಿಸಿದರು.
'ಈ ಯುಗದ ಅತ್ಯುತ್ತಮ 'ವೈಟ್-ಬಾಲ್' ಆಟಗಾರ ವಿರಾಟ್ ಕೊಹ್ಲಿ ಎಂದು ನಾನು ಭಾವಿಸುತ್ತೇನೆ. ದುರದೃಷ್ಟವಶಾತ್, 2019ರ ನಂತರ ಉನ್ನತ ಮಟ್ಟದಲ್ಲಿ ಪ್ರಾಬಲ್ಯವನ್ನು ಕಾಯ್ದುಕೊಳ್ಳಲು ಅಗತ್ಯವಿರುವಂತಹ ಆಟಗಾರರನ್ನು ಅಂದರೆ 80 ಅಥವಾ 90ರ ದಶಕದಲ್ಲಿ ನಮ್ಮಲ್ಲಿದ್ದಂತಹ ಆಟಗಾರರನ್ನು ನಾವು ಹಾಗೆ ರೂಪಿಸಿಲ್ಲ' ಎಂದು ಯೂಸುಫ್ ಹೇಳಿದರು.
ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಮಾಜಿ ಪ್ರಮುಖ ಆಟಗಾರ, ಸದ್ಯದ ಆಟಗಾರರಿಗೆ ಕಠಿಣ ಪರಿಶ್ರಮ ಪಡುವ ಮನಸ್ಸಿಲ್ಲ ಎಂದು ಹೇಳಿದರು.
'ದುರದೃಷ್ಟಕರ ಸಂಗತಿಯೆಂದರೆ, ಸದ್ಯ ಇರುವ ಆಟಗಾರರಲ್ಲಿ ಕೆಲವರು ಹೆಚ್ಚಿನ ಸಮಯವನ್ನು ಮೀಸಲಿಡಲು ಮತ್ತು ಕಠಿಣ ಪರಿಶ್ರಮ ಪಡಲು ಇಷ್ಟಪಡುವುದಿಲ್ಲ ಎಂದು ನನಗೆ ಅನ್ನಿಸುತ್ತದೆ. ನಾನು ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಕೆಲಸ ಮಾಡಿದ್ದೇನೆ; ಆಟಗಾರರು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿಲ್ಲ ಎಂದು ನನಗೆ ಕೆಲವೊಮ್ಮೆ ಅನಿಸಿದೆ' ಎಂದರು.
'ಕ್ರಿಕೆಟ್ ಎಂತಹ ಕ್ರೀಡೆಯೆಂದರೆ, ನೀವು ಎಷ್ಟೇ ಆಡಿದ್ದರೂ ಪ್ರತಿದಿನವೂ ಹೊಸದೊಂದನ್ನು ಕಲಿಯುತ್ತಲೇ ಇರುತ್ತೀರಿ. 'ನಮಗೆ ಎಲ್ಲವೂ ತಿಳಿದಿದೆ' ಎಂದು ನೀವು ಭಾವಿಸಿದ ಕ್ಷಣದಿಂದಲೇ ನಿಮ್ಮ ಅವನತಿ ಆರಂಭವಾಗುತ್ತದೆ' ಎಂದು ಯೂಸುಫ್ ಸೇರಿಸಿದರು.
ರಾಷ್ಟ್ರೀಯ ತಂಡದ ಆಯ್ಕೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿರುವ ಯೂಸುಫ್, ಸರ್ಫರಾಜ್ ಅಹ್ಮದ್ ನಾಯಕರಾಗಿದ್ದಾಗ ಪಾಕಿಸ್ತಾನ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಿದರು.
'ತಂಡವು ಉತ್ತಮ ಸಾಧನೆ ಮಾಡುವುದನ್ನು ನೋಡಲು ಬಯಸಿದ್ದರಿಂದ ಸರ್ಫರಾಜ್ ತಮ್ಮ ತಂಡಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ನನಗೆ ಅನ್ನಿಸಿತು. 'ನೀವು ಏಕೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದು?' ಎಂದು ನಾನು ಅವರನ್ನು ಕೇಳಿದ್ದು ನನಗೆ ನೆನಪಿದೆ; ಅದಕ್ಕೆ ಅವರು, 'ತಮ್ಮ ಬ್ಯಾಟಿಂಗ್ ಕ್ರಮಾಂಕಕ್ಕಿಂತ ತಂಡದ ಫಲಿತಾಂಶವೇ ತಮಗೆ ಅತ್ಯಂತ ಮುಖ್ಯ' ಎಂದು ಉತ್ತರಿಸಿದ್ದರು' ಎಂದು ಅವರು ಹೇಳಿದರು.
ಸರ್ಫರಾಜ್ ಅವರನ್ನು ಪಕ್ಕಕ್ಕೆ ಸರಿಸಿದ ನಂತರ ಪಾಕಿಸ್ತಾನ ಕ್ರಿಕೆಟ್‌ಗೆ ಸಮಸ್ಯೆಗಳು ಆರಂಭವಾದವು ಮತ್ತು ತಂಡದಲ್ಲಿ ಪದೇ ಪದೆ ಮಾಡಲಾದ ಬದಲಾವಣೆಗಳು ಕೂಡ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ ಎಂದು ಯೂಸುಫ್ ಹೇಳಿದರು.
ತಮ್ಮದೇ ಉದಾಹರಣೆಯನ್ನು ನೀಡಿದ ಯೂಸುಫ್, ಕೇವಲ ಎರಡು ಪಂದ್ಯಾವಳಿಗಳ ನಂತರ ಜೂನಿಯರ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ತಮ್ಮನ್ನು ಏಕೆ ತೆಗೆದುಹಾಕಲಾಯಿತು ಎಂಬುದು ನನಗೇ ಅರ್ಥವಾಗಲಿಲ್ಲ ಎಂದ ಅವರು, 'ನನಗೆ ಗೊತ್ತಿಲ್ಲ; ಅದಕ್ಕೆ ಯಾವುದೇ ಅರ್ಥವಿರಲಿಲ್ಲ' ಎಂದು ಹೇಳಿದರು.
ನಾನು ನ್ಯೂಜಿಲೆಂಡ್‌ನಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದಾಗ ಬಾಬರ್ ಅಜಂ ಅವರೊಂದಿಗೆ ಸಮಯ ಕಳೆದು, ಅವರು ಎಲ್ಲಿ ತಪ್ಪು ಮಾಡುತ್ತಿದ್ದಾರೆ ಎಂಬುದನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ; ಆದರೆ ಅವರು ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಅವರ ಬ್ಯಾಟಿಂಗ್‌ನಲ್ಲಿ ತಾಂತ್ರಿಕ ದೋಷಗಳಿವೆ' ಎಂದು ಯೂಸುಫ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಒತ್ತಡವೂ ಇದರಲ್ಲಿ ಪಾತ್ರ ವಹಿಸುತ್ತಿರಬಹುದು ಎಂಬ ಅಭಿಪ್ರಾಯವನ್ನು ತಳ್ಳಿಹಾಕಿದ ಅವರು, 'ನನಗೊಂದು ವಿಷಯ ಹೇಳಿ, ಭಾರತೀಯ ಆಟಗಾರರ ಮೇಲೆ ಸಾಮಾಜಿಕ ಜಾಲತಾಣಗಳ ಒತ್ತಡ ಹೆಚ್ಚಾಗಿರುವುದಿಲ್ಲವೇ? ಹಾಗಿದ್ದರೂ ಅವರು ಅದನ್ನು ಹೇಗೆ ನಿಭಾಯಿಸುತ್ತಾರೆ?. ಇದು ಕೇವಲ ಒಂದು ನೆಪವಷ್ಟೇ; ವೃತ್ತಿಪರ ಕ್ರಿಕೆಟಿಗರಾಗಿ, ತಮ್ಮ ಕೌಶಲವನ್ನು ಕಾಯ್ದುಕೊಳ್ಳಲು ಮತ್ತು ಅದನ್ನು ಉತ್ತಮಪಡಿಸಿಕೊಳ್ಳಲು ನೀವು ಸಾಕಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹಿರಿಯ ಆಟಗಾರರು ತರಬೇತುದಾರರ ಮಾತನ್ನು ಕೇಳದಿರುವುದು ಒಂದು ಸಮಸ್ಯೆಯಾಗಿದೆ' ಎಂದು ತಿಳಿಸಿದರು.
'ನಾವು ಎಲ್ಲದಕ್ಕೂ ತರಬೇತುದಾರರನ್ನೇ ದೂಷಿಸುತ್ತೇವೆ; ಆದರೆ, ಆಟಗಾರರು ತಾವು ಮಾಡಬೇಕಾದ ಕೆಲಸವನ್ನೇ ಮಾಡದಿದ್ದಾಗ ತರಬೇತುದಾರರು ಏನು ಮಾಡಲು ಸಾಧ್ಯ?" ಎಂದು ಅವರು ಪ್ರಶ್ನಿಸಿದರು.