ಶಿಷ್ಟಾಚಾರ ಉಲ್ಲಂಘನೆ ಉಮಾಶ್ರೀಗೆ ಘೇರಾವ್

ಬೀದರ್: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸುವ ವಿಚಾರದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರ ಕಾರು ಅಡ್ಡಗಟ್ಟಿ ಕೆಲ ಹೊತ್ತು ಪ್ರತಿಭಟಿಸಿದ ಘಟನೆ ನಡೆಯಿತು.
ನಗರದ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಹೊರ ಹೋಗುತ್ತಿದ್ದ ಸಚಿವೆ ಉಮಾಶ್ರೀ ಅವರ ಕಾರಿಗೆ ಅಡ್ಡಗಟ್ಟಿ ನಿಂತ ಶಾಸಕರು ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸವಕಲ್ಯಾಣ ನಗರದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ. ಸಹಾಯಕ ಆಯುಕ್ತೆ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರನ್ನು ಸಂಪರ್ಕಿಸಿದಾಗ ರಾಷ್ಟ್ರ ಧ್ವಜಾರೋಹಣ ಸಂದರ್ಭದ ಕಾರ್ಯಕ್ರಮಗಳಿಗೆ ಅಧ್ಯಕ್ಷತೆ, ಮುಖ್ಯ ಅತಿಥಿಗಳೆಂದು ಗುರುತಿಸಿ ಆಹ್ವಾನಿಸುವುದಕ್ಕೆ ಅವಕಾಶವಿಲ್ಲ. ಅದಾಗ್ಯೂ ತಮ್ಮ ಹೆಸರನ್ನು ಮುಖ್ಯ ಅತಿಥಿಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಭಾಲ್ಕಿ, ಹುಮನಾಬಾದ್ ಮತ್ತು ಬೀದರ್ ತಾಲೂಕು ಕೇಂದ್ರಗಳಲ್ಲಿ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ ಎಂದು ದೂರಿದರು. ಇದಲ್ಲದೆ ಬಸವಕಲ್ಯಾಣದ ಗಾಂಧಿ ವೃತ್ತ, ನೆಹರು ವೃತ್ತ, ಬಸವೇಶ್ವರ ವೃತ್ತ ಮತ್ತಿತರ ಪ್ರಮುಖ ವೃತ್ತಗಳಲ್ಲಿ ಸರ್ಕಾರದ ವತಿಯಿಂದ ನಡೆಸಲಾಗುತ್ತಿದ್ದ ರಾಷ್ಟ್ರ ಧ್ವಜಾರೋಹಣಕ್ಕೂ ಈ ಬಾರಿ ಕೊಕ್ ನೀಡಲಾಗಿದ್ದು, ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾದಂತಾಗಿದೆ ಎಂದು ಖೂಬಾ ಅಸಮಧಾನ ವ್ಯಕ್ತಪಡಿಸಿದರು.
ಉಮಾಶ್ರೀ ಅವರು ಶಾಸಕರು ಮನವೊಲಿಸಲು ಯತ್ನಿಸಿದರು. ಅದಕ್ಕೆ ಕಿವಿಗೊಡದ ಖೂಬಾ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಪಟ್ಟು ಹಿಡಿದರು. ಈ ವಿಚಾರವಾಗಿ ತನಿಖೆಗೆ ಆದೇಶಿಸುವುದಾಗಿ ಮತ್ತು ಶಾಸಕರಿಗೆ ಸೂಕ್ತ ಮಾಹಿತಿ ರವಾನಿಸುವುದಾಗಿ ಸಚಿವರು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


