ಇಲ್ಲಿ ಎಚ್ಡಿಕೆಗೆ ಹೆಡೆಮುರಿ, ಅಲ್ಲಿ ಶ್ರೀರಾಮುಲುಗೆ ನಿದ್ರಾಭಂಗ

ರಾಮನಗರ: ತವರು ಜಿಲ್ಲೆ ರಾಮನಗರದಲ್ಲಿ ಕಡುವೈರಿ ಎಚ್.ಡಿ. ಕುಮಾರಸ್ವಾಮಿ ಭದ್ರಕೋಟೆಯನ್ನು ಛಿದ್ರಗೊಳಿಸಿಪಾರುಪತ್ಯ ಸ್ಥಾಪಿಸುವ ಮೂಲಕ 'ಪವರ್'ಗೆ ಮರಳಿದ ಡಿ.ಕೆ ಶಿವಕುಮಾರ್ ಅತ್ತ ಬಳ್ಳಾರಿಯಲ್ಲೂ ಕಾಂಗ್ರೆಸ್ ಕಮಾಲ್ಗೆ ಕಾರಣರಾಗಿ ಗಮನ ಸೆಳೆದಿದ್ದಾರೆ.
ರಾಮನಗರ ಹಾಗೂ ಬಳ್ಳಾರಿ ಉಭಯ ಜಿಲ್ಲೆಗಳು ಗಣಿ ಜತೆಗೆ ಗಡಿ ಜಿಲ್ಲೆಗಳೂ ಹೌದು. ಅಲ್ಲಿನ ಗಣಿ ಧಣಿಗಳ ಹಿಡಿತದಿಂದ ಬಳ್ಳಾರಿಯನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದ ಶಿವಕುಮಾರ್ ಕೂಡ ರಾಮನಗರದಲ್ಲಿ ಗಣಿಧಣಿಯೇ ಆಗಿರುವುದು ಕಾಕತಾಳೀಯ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸಹಿತ ಘಟಾನುಘಟಿಗಳ ಜತೆ ಸೆಣೆಸಾಡಿಕೊಂಡೇ ಬಂದಿರುವ ಶಿವಕುಮಾರ್ ಅವರಿಗೆ ಚುನವಾಣೆಗಳೆಂದರೆ ಹಬ್ಬವಿದ್ದಂತೆ. ಚುನಾವಣಾ ರಣಾಂಗಣದಲ್ಲಿ ಗೆಲವನ್ನೇ ಗುರಿಯಾಗಿಸಿಕೊಂಡ ಅವರು ಸೈನಿಕನಷ್ಟೇ ಅಲ್ಲದೆ ಸಾರಥಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ.
ಫಲಿಸದ ಪ್ರಯೋಗ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಆಯ್ಕೆಯಾದ ಎಚ್.ಡಿ ಕುಮಾರಸ್ವಾಮಿ ಸಲ್ಲಿಸಿದ ರಾಜಿನಾಮೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಉಳಿಕೆ 8 ತಿಂಗಳ ಸೀಮಿತ ಅವಧಿಗೆ 2013ರಲ್ಲಿ ಉಪ ಕದನವೇರ್ಪಟ್ಟಿತ್ತು. ಆಗ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಬಿಜೆ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಅಚ್ಚರಿ ಬೆಳವಣಿಗೆಯಲ್ಲಿ ಸಹೋದರ ಡಿ.ಕೆ ಸುರೇಶ್ ಅವರನ್ನು ಕಾಂಗ್ರೆಸ್ ಉಮೇದುವಾರರನ್ನಾಗಿ ಕಣಕ್ಕೆ ಇಳಿಸಿದ ಶಿವಕುಮಾರ್ ಯಶಸ್ಸು ಕಂಡರು. ಅವರು ಬೇಡವೆಂದು ಬಿಟ್ಟು ಹೋದ ಸ್ಥಾನವನ್ನು ನಮಗೆ ನೀಡಿ, ನಿಮ್ಮ ಸೇವೆಗೆ ಅವಕಾಶ ಕೊಡಿ ಎನ್ನುವ ಕೋರಿಕೆಯನ್ನು ಇಲ್ಲಿನ ಮತದಾರರ ಮುಂದಿಟ್ಟಿದ್ದರು. ಈಗ ಬಳ್ಳಾರಿಯಲ್ಲೂ ಅದೇ ಮಂತ್ರ ಪಠಿಸುತ್ತಲೇ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡಿದ್ದರು.
ಸಹೋದರನನ್ನು ಗೆಲ್ಲಿಸಿಕೊಂಡು ಇಂಧನದಂತಹ ಪ್ರಭಾವಿ ಖಾತೆಯೊಂದಿಗೆ ಸಂಪುಟ ಪ್ರವೇಶಿಸಿದ ಶಿವಕುಮಾರ್, ಇದೀಗ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಉಸ್ತುವಾರಿವಹಿಸಿಕೊಂಡು ಸ್ವೀಕರಿಸಿದ ಸವಾಲನ್ನು ಗೆದ್ದು ಬೀಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


