

ಕಲಬುರಗಿ: ಅತ್ಯಾಚಾರಕ್ಕೊಳಗಾದ ಬಾಲಕಿ ಅಪ್ರಾಪ್ತೆ(7ವರ್ಷ), ಅತ್ಯಾಚಾರ ಮಾಡಿದವರೂ ಅಪ್ರಾಪ್ತರು (6,7 ಮತ್ತು 8ನೇ ತರಗತಿ ಬಾಲಕರು)!
ಚಿತ್ತಾಪುರ ತಾಲೂಕಿನ ಕಾಳಗಿ ಠಾಣೆ ವ್ಯಾಪ್ತಿಯಲ್ಲಿ ಡಿ.19ರ ಶನಿವಾರ ಸಂಜೆ ಸಂಭವಿಸಿರುವ ಅತ್ಯಾಚಾರ ಸನ್ನವೇಶವಿದು. ಬಾಲಕಿ ಶಾಲೆಯಿಂದ ಮನೆಗೆ ವಾಪಸ್ಸಾಗುವಾಗ ತಾಂಡಾದ ಕೆಲವು ಬಾಲಕರು ಕೂಡಿಕೊಂಡು ಆಕೆಯನ್ನು ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ.
ಬಾಲಕಿಯನ್ನು ಕೂಡಿ ಹಾಕಿದ್ದ ಮನೆಯಲ್ಲಿ ಮೊದಲು ಓರ್ವ ಬಾಲಕ ಹೋಗಿ ಆಕೆಯ ಮೇಲೆ ಬಲಾತ್ಕಾರ ಮಾಡುತ್ತಾನೆ. ಈ ಸಂದರ್ಭದಲ್ಲಿ ಉಳಿದ ಮೂವರೂ ಬಾಲಕರು ಅದೇ ಮನೆಯ ಹೊರಗಡೆ ಕಾವಲು ಕುಳಿತಿರುತ್ತಾರೆ. ಇದಾದ ನಂತರ ಬಾಲಕಿಯನ್ನು ತೊಗರಿ ಹೊಲಕ್ಕೆ ಕರೆದೊಯ್ದು, ಅಲ್ಲಿ ಉಳಿದ ಮೂವರು ಬಾಲಕರು ಆಕೆಗೆ ಬಲಾತ್ಕಾರ ಮಾಡಿದ್ದಾರೆ. ಈ ಪ್ರಕರಣವನ್ನು ಕಾಳಗಿ ಸಿಬಿಐ ಇಸ್ಮಾಯಿಲ್ ಶರೀಫ್ ಧೃಢಪಡಿಸಿದ್ದಾರೆ. ಇಸ್ಮಾಯಿಲ್ ಶರೀಫ್ ಅವರು ಬಾಲಕಿಗೆ ಬಲಾತ್ಕಾರ ಮಾಡಿದ ನಾಲ್ವರೂ ಬಾಲಕರನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಜ್ಜಿ ಜೊತೆಗಿದ್ದಳು
ನತದೃಷ್ಟ ಬಾಲಕಿ ಅಜ್ಜಿ ಜೊತೆಗೆ ಕಿಂಡಿ ತಾಂಡಾದಲ್ಲಿದ್ದಳು. ಈ ತಾಂಡಾಕ್ಕೆ ವಟವಟಿ ತಾಂಡಾ ಅಥವಾ ಅರಣಕಲ್ ತಾಂಡಾ ಎಂದೂ ಕರೆಯುತ್ತಾರೆ. ಬಾಲಕಿಯ ಪಾಲಕರು ದೂರುದ ಮುಂಬೈಗೆ ಕೆಲಸಕ್ಕೆಂದು ಹೋಗಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವಾದ ಸಂದರ್ಭದಲ್ಲಿ ಆಕೆಯ ಅಜ್ಜಿ ಮಹಾಗಾಂವ್ ಸಂತೆಗೆ ಹೋಗಿದ್ದಳು. ಅಜ್ಜಿ ಬಂದ ಮೇಲೆ ಬಾಲಕಿ ತನಗೆ ನಾಲ್ವರು ಕೂಡಿಕೊಂಡು ಬಾಲಕರು ಲೈಂಗಿಕವಾಗಿ ಕಿರುಕುಳ ನೀಡಿರುವ ಬಗ್ಗೆ ಹೇಳಿದ್ದಾಳೆ.