

2015 ಹೊಸ ವರ್ಷದ ಆಚರಣೆಗೆ ಬೆಂಗಳೂರು ಸಿದ್ಧತೆ ನಡೆಸಿರುವಾಗಲೇ ಬಾಂಬ್ ಸ್ಫೋಟ ಬೆಚ್ಚಿ ಬೀಳಿಸಿದೆ. ಇದು ಹೊಸ ವರ್ಷದ ಆಚರಣೆಗೆ ಅಡ್ಡಿ ಪಡಿಸುವುದಕ್ಕಾಗಿಯೇ ನಡೆದ ಕೃತ್ಯವೇ ಎಂಬ ಅನುಮಾನವೂ ಶುರುವಾಗಿದೆ. ಸಾಮಾನ್ಯವಾಗಿ ಹೊಸ ವರ್ಷಾಚರಣೆ ವಿಶೇಷವಾಗಿ ನಡೆಯುವುದು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ಭಾಗಗಳೇ ಆಗಿರುವುದರಿಂದ ಇದಕ್ಕೆ ಅಡ್ಡಿ ಪಡಿಸುವುದಕ್ಕಾಗಿ ಈ ಕೃತ್ಯ ನಡೆದಿರುವ ಶಂಕೆ ಇದೆ.
ಹುಸಿ ಬಾಂಬ್ ಕರೆ
ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಸುದ್ದಿಯ ಬೆನ್ನಲ್ಲೇ, ಶಾಂತಿನಗರ ಬಸ್ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆಯೊಂದು ನಗರ ಪೊಲೀಸರಿಗೆ ಬಂದಿತ್ತು. ತಕ್ಷಣವೇ ಜಂಟಿ ಪೊಲೀಸ್ ಆಯುಕ್ತ ಶರತ್ ಚಂದ್ರ ಮತ್ತವರ ತಂಡ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಅದು ಹುಸಿ ಬಾಂಬ್ ಕರೆ ಎಂಬುದು ಬಯಲಾಯಿತು.
ಸುಧಾರಿತ ಸ್ಫೋಟಕ ಬಳಕೆ
ಸ್ಫೋಟದ ಬಗ್ಗೆ ವಿವರ ನೀಡಿದ ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ, ರಾತ್ರಿ ಎಂದಿನಂತೆ ಜನ ಸಂಚಾರ ಇತ್ತು. ಈ ವೇಳೆ ಅಲ್ಲಿ ನಡೆದುಹೋಗುತ್ತಿದ್ದ ಭವಾನಿ, ಮತ್ತೊಬ್ಬ ವ್ಯಕ್ತಿಗೆ ಗಾಯವಾಗಿದೆ. ತಕ್ಷಣ ಗಾಯಾಳುಗಳನ್ನು ಕೋಬ್ರಾ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ಬಾಂಬ್ ಪತ್ತೆ ದಳ, ಶ್ವಾನದಳ, ಇಂಟರ್ನಲ್ ಸೆಕ್ಯೂರಿಟಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಈ ರಸ್ತೆಯ ಕೆಲ ಅಂಗಡಿಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಿದ್ಧತೆ ಸಹ ನಡೆಯುತ್ತಿತ್ತು. ಇದು ಸುಧಾರಿತ ಸ್ಫೋಟಕದಿಂದ ಉಂಟಾದ ಸ್ಫೋಟ ಎಂದು ಹೇಳಬಹುದು. ಆದರೆ ಈಗಲೇ ಸ್ಫೋಟದ ಹಿಂದೆ ಉಗ್ರರ ಕೈವಾಡ ಇರುವುದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೇ ದಿನ ನಡೆದಿತ್ತು ಮೊದಲ ದಾಳಿ
ಬೆಂಗಳೂರು ನಗರು ಮೊದಲ ಬಾರಿಗೆ ಭಯೋತ್ಪಾದಕ ದಾಳಿಯನ್ನು ಕಂಡಿದ್ದು 2005ರ ಡಿ.28ರಂದು. ನಗರದ ಐಐಎಸ್ಸಿ ಆವರಣಕ್ಕೆ ನುಗ್ಗಿದ ಐವರು ಬಂದೂಕುಧಾರಿಗಳು ಏಕಾಏಕಿ ನಡೆಸಿದ ಗುಂಡಿನ ದಾಳಿಗೆ ದೆಹಲಿಯ ವಿಜ್ಞಾನಿ ಮುನೀಶ್ ಚಂದ್ರಪುರಿ ಸಾವಿಗೀಡಾಗಿದ್ದರು. ಈ ಘಟನೆಯು ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಅಚ್ಚರಿಯ ವಿಚಾರವೆಂದರೆ, ಅಂದಿನ ದಾಳಿಗೂ ಭಾನುವಾರ ನಗರದ ಚರ್ಚ್ಸ್ಟ್ರೀಟ್ನಲ್ಲಿ ನಡೆದ ದಾಳಿಗೂ ಇರುವ ಸಾಮ್ಯತೆಯೆಂದರೆ, ಎರಡೂ ನಡೆದದ್ದು ಡಿ.28 ರಂದೇ. 2005ರ ಮೊದಲ ಉಗ್ರ ದಾಳಿ ವೇಳೆ ಒಬ್ಬರು ಮೃತಪಟ್ಟು , ನಾಲ್ವರು ಗಾಯಗೊಂಡಿದ್ದರು. ಅಂದು ಬೆಳಗ್ಗೆ 7 ಗಂಟೆಯ ವೇಳೆ ಬಿಳಿ ಅಂಬಾಸಡರ್ ಕಾರಿನಲ್ಲಿ ಬಂದಿದ್ದ ಉಗ್ರಗಾಮಿಗಳು ಐಐಎಸ್ಸಿ ಕ್ಯಾಂಪಸ್ನೊಳಕ್ಕೆ ನುಗ್ಗಿದ್ದರು. ಅಂತಾರಾಷ್ಟ್ರೀಯ ಸಮಾವೇಶಕ್ಕೆಂದು ಬಂದಿದ್ದ ವಿಜ್ಞಾನಿಗಳು ಉಪಾಹಾರ ಸೇವಿಸಲೆಂದು ಸಭಾಂಗಣದ ಹೊರಬರುತ್ತಿದ್ದಂತೆ ಸೇನೆಯ ಸಮವಸ್ತ್ರ ಧರಿಸಿದ್ದ ಉಗ್ರರು ಗುಂಡು ಹಾರಾಟ ಶುರುಮಾಡಿದ್ದರು.
2013 ಏ. 17
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಸಮೀಪ ಸ್ಫೋಟ. 16 ಮಂದಿಗೆ ಗಾಯ. ಅಲ್ ಉಮ್ಮಾ ಉಗ್ರರ ಕೈವಾಡದ ಶಂಕೆ. ತಮಿಳುನಾಡಿನಲ್ಲಿ ಈಗಾಗಲೇ ಹಲವರ ಬಂಧನ
2010 ಏ. 17
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅವಳಿ ಸ್ಫೋಟ. 15 ಮಂದಿಗೆ ಗಾಯ. ಮೂರನೇ ಬಾಂಬ್ ನ್ನು ನಿಷ್ಕ್ರಿಯಗೊಳಿಸಿದ್ದ ಬಾಂಬ್ ನಿಷ್ಕ್ರಿಯ ದಳ.
2008 ಜು.25
ಬೆಂಗಳೂರಿನಲ್ಲಿ 9 ಸರಣಿ ಸ್ಫೋಟ. 2 ಸಾವು, 20 ಮಂದಿಗೆ ಗಾಯ
2005 ಡಿ. 28
ಐಐಎಸ್ಸಿ ಆವರಣದಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ. ದೆಹಲಿಯ ವಿಜ್ಞಾನಿ ಮುನೀಶ್ ಚಂದ್ರ ಪುರಿ ಸಾವು. ಇದು ಬೆಂಗಳೂರಿನ ಮೊದಲ ಭಯೋತ್ಪಾದಕ ದಾಳಿ.
ಅಲ್ -ಉಮ್ಮಾ ಸಂಘದ ಕೈವಾಡ
ಈ ಘಟನೆ ಹಿಂದೆ ನಿಷೇಧಿತ ಅಲ್ -ಉಮ್ಮಾ ಉಗ್ರ ಸಂಘಟನೆ ಕೈವಾಡ ಇರಬಹುದು ಎಂಬ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. 1998ರಲ್ಲಿ ತಮಿಳುನಾಡು ಸರ್ಕಾರ ಈ ಸಂಘಟನೆಯನ್ನು ನಿಷೇಧಿಸಿತ್ತು. ಆ ಸಂಘಟನೆ ಸದಸ್ಯರ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು, ನಗರದಲ್ಲಿ ಈ ಹಿಂದೆ ಸ್ಫೋಟ ಹಾಗೂ ಅಲ್ಲಿ ಬಳಸಿದ್ದ ರಾಸಾಯನಿಕ ವಸ್ತುಗಳ ಸಾಮ್ಯತೆಯನ್ನು ಪರಿಶೀಲಿಸಿದ್ದಾರೆ.
ಮುಖ್ಯಮಂತ್ರಿ ಜತೆ ರಾಜ್ನಾಥ್ ಮಾತು
ಸ್ಫೋಟದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜತೆ ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ಬಗ್ಗೆ ವಿವರ ತೆಗದುಕೊಂಡಿದ್ದಾರೆ. ಇದೇ ವೇಳೆ ಕೇಂದ್ರ ಕಾನೂನು ಸಚಿವ ಸದಾನಂದಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಬಾಂಬ್ ಹೇಗಿತ್ತು?
ಬಾಂಬ್ನ್ನು ಹೂಕುಂಡದಲ್ಲಿಟ್ಟು, ರೆಸ್ಟೋರೆಂಟ್ ಮುಂದಿನ ಗಿಡದ ಪೊದೆಯಲ್ಲಿ ಇಡಲಾಗಿತ್ತು. ಅದನ್ನು ಪ್ಲಾಸ್ಟಿಕ್ ಕವರ್ನಲ್ಲಿ ಬಾಕ್ಸ್ ರೀತಿಯ ವಸ್ತುವಿನಲ್ಲಿ ಸುತ್ತಿ ಮೊಳೆಗಳನ್ನು ಸಹ ಇಡಲಾಗಿತ್ತು. ಬಾಂಬ್ ಸ್ಫೋಟಿಸಿದ್ದ ರಭಸಕ್ಕೆ ಸುಮಾರು 100 ಮೀಟರ್ ದೂರದಲ್ಲಿ ಆ ಮೊಳೆಗಳು ಹಾಗೂ ಬಾಂಬ್ನ ಕುರುಹುಗಳು, ರಾಸಾಯನಿಕ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಾಗಿಸಲಾಗಿದೆ. ಬಾಂಬ್ ತಯಾರಿಕೆಗೆ ಟೈಮರ್, ಬ್ಯಾಟರಿ, ಅಲ್ಯುಮಿನಿಯಂ ಪೈಪ್, ಮೊಳೆ, ವೈಯರ್, ಅಮೋನಿಯಂ, ನೈಟ್ರೇಟ್ ರಾಸಾಯನಿಕಗಳನ್ನು ಬಳಸಿರುವ ಶಂಕೆಯಿದೆ. ಇದನ್ನು ಲುಂಗಿಯಲ್ಲಿ ಸುತ್ತಿಡಲಾಗಿತ್ತು. ಜತೆಗೆ ತೆಲುಗು ಭಾಷೆಯ ಪೇಪರ್ನ್ನು ಸುತ್ತಲಾಗಿದೆ. ಈ ಬಾಂಬ್ ಅನ್ನು ಇಲ್ಲೇ ತಯಾರಿಸಲಾಗಿರುವ ಶಂಕೆಯೂ ಇದೆ. ಅದನ್ನು ಜನನಿಬಿಡ ಪ್ರದೇಶದಲ್ಲಿಟ್ಟು, ಸ್ಫೋಟಿಸಿ ಈ ಮೂಲಕ ಭಾರಿ ಪ್ರಮಾಣದ ಅನಾಹುತ ಸೃಷ್ಟಿಸುವ ಹುನ್ನಾರ ದುಷ್ಕರ್ಮಿಗಳದ್ದು ಎನ್ನಲಾಗಿದೆ.
ಇಬ್ಬರು ವಶಕ್ಕೆ
ಈ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಪಾನ್ ಅಂಗಡಿಯವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ಈ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು , ಅಂಗಡಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುವುದು ಎಂದು ರಾಜ್ಯ ಪೊಲೀಸ್ ಆಯುಕ್ತ ಲಾಲ್ ರುಖುಮಾ ಪಚಾವೋ ತಿಳಿಸಿದ್ದಾರೆ.
ಹೆಚ್ಚಿದ್ದ ಜನಸಂದಣಿ
ಪಬ್, ಐಷಾರಾಮಿ ಹೋಟೆಲ್, ಶಾಪಿಂಗ್ ಮಳಿಗೆಗಳಿಂದ ಕೂಡಿರುವ ಚರ್ಚ್ಸ್ಟ್ರೀಟ್ ನಲ್ಲಿ ಹೆಚ್ಚಾಗಿ ಐಷರಾಮಿ ಜನರಿಂದ ಗಿಜಿಗುಡುತ್ತಿದ್ದು, ವಾರಾಂತ್ಯದಲ್ಲಿ ಇಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಅಲ್ಲದೆ, ಹೊಸ ವರ್ಷ ಸಮೀಪಿಸಿದ್ದ ಕಾರಣ ಜನಸಂದಣಿ ಎಂದಿಗಿಂತ ಸ್ಪಲ್ಪ ಹೆಚ್ಚಾಗೇ ಇತ್ತು. ಆ ಭಾಗದ ರಸ್ತೆಗಳಲ್ಲಿ ಮಾಮೂಲಿಯಾಗಿ ಸಂಭ್ರಮದಲ್ಲಿದ್ದ ನಗರ ರಾತ್ರಿ 8.30ರ ಸುಮಾರಿಗೆ ಇಡೀ ವಾತಾವರಣವೇ ಬದಲಾಯಿತು.
ಭಿಮಾಸ್ ಹೋಟೆಲ್ನಲ್ಲಿ ಊಟಮಾಡುತ್ತಿದ್ದೆ. ಭಾರಿ ಶಬ್ದ ಕೇಳಿತು. ಹೊರಗಡೆ ಬಂದು,ಸ್ಥಳಕ್ಕೆ ಹೋದಾಗ, ಮಹಿಳೆಯೊಬ್ಬರು ಗಾಯಗೊಂಡು ಬಿದ್ದಿದ್ದರು. ತಕ್ಷಣವೇ ಅವರನ್ನು ಆಟೋದಲ್ಲಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಆ ನಂತರ ಸುದ್ದಿ ಗೊತ್ತಾಗಿ ಪೊಲೀಸರು ಸ್ಥಳಕ್ಕೆ ಬಂದರು.
ಶಿವಕುಮಾರ್
ಕಾರ್ಪೋರೇಟರ್, ಪ್ರತ್ಯಕ್ಷದರ್ಶಿ
ಸ್ಫೋಟದಿಂದ ಗಾಯಗೊಂಡಿದ್ದ ಭವಾನಿ ಅವರಿಗೆ ತೀವ್ರ ರಕ್ತಸ್ರಾವ ಆಗಿತ್ತು. ತುರ್ತು ನಿಗಾ ಘಟಕದಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಯಿತು. ಮೆದುಳು ಭಾಗದಲ್ಲಿ ಹೆಚ್ಚು ಪೆಟ್ಟು ಬಿದ್ದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅವರು ಮೃತಪಟ್ಟಿದ್ದಾರೆ.
ಡಾ. ಕಂಚನ್,
ಮಲ್ಯ ಆಸ್ಪತ್ರೆ ವೈದ್ಯರು