

ಬೆಂಗಳೂರು: ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಕೆಂಗೇರಿಯ ಮೈಲಸಂದ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಸತತ ಐದು ವರ್ಷಗಳ ನಂತರ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ವಿಷ್ಣುವರ್ಧನ್ ಕುಟುಂಬದವರ ಹೋರಾಟ ಮತ್ತು ಅವರ ಅಭಿಮಾನಿಗಳ ಒತ್ತಡದ ಫಲವಾಗಿ ಸ್ಮಾರಕ ನಿರ್ಮಾಣಕ್ಕೆ ಕೆಂಗೇರಿಯ ಮೈಲಸಂದ್ರದಲ್ಲಿ ಎರಡು ಎಕರೆ ಜಾಗ ಮೀಸಲಾಗಿದೆ.
ವಿಷ್ಣುವರ್ಧನ್ ಅವರ ಸ್ಮರಣಾ ದಿನವಾದ ಇಂದು ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ಸಲ್ಲಿಸುವ ಮೂಲಕ ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸೋಮಶೇಖರ್, ಭಾರತೀ ವಿಷ್ಣುವರ್ಧನ್, ಶಾಲೀನಿ ರಜನೀಶ್ ಸೇರಿದಂತೆ ಮತ್ತೀತರ ಗಣ್ಯರು ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಅಂಬರೀಷ್, ವಿಷ್ಣುವರ್ಧನ್ ಅವರನ್ನು ನೆನೆದು ಭಾವುಕರಾದರು. ವಿಷ್ಣು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ವೇಳೆ, ವಿಷ್ಣು ಅವರ ಸವಿ ನೆನಪುಗಳನ್ನು ನೆನೆದು ಕಣ್ಣೀರು ಹಾಕಿದ ದೃಷ್ಯ ಕಾರ್ಯಕ್ರಮದಲ್ಲಿ ನೆರೆದಿದ್ದ ವಿಷ್ಣು ಕುಟುಂಬ ಹಾಗೂ ಅಭಿಮಾನಿಗಳ ಮನಕಲಕುವಂತೆ ಮಾಡಿತು. ಸಚಿವೆ ಉಮಾಶ್ರೀ ಭಾವುಕರಾಗಿದ್ದ ಅಂಬರೀಷ್ ಅವರನ್ನು ಸಂತೈಸಿದರು.