ಜಿಲ್ಲಾ ಸುದ್ದಿ

ಈ ಬಾರಿ ಹ್ಯಾಟ್ರಿಕ್ ಅಂಬಾರಿ!

ಈ ಬಾರಿ ಹ್ಯಾಟ್ರಿಕ್ ಅಂಬಾರಿ!
Published On :

3ನೇ ಬಾರಿ ಅರ್ಜುನನಿಗೆ ಅಂಬಾರಿ ಹೊತ್ತೊಯ್ಯುವ ಜವಾಬ್ದಾರಿ

ಮೈಸೂರು:
ಅರ್ಜುನ ಆನೆಗೆ ಹ್ಯಾಟ್ರಿಕ್ ಸಂಭ್ರಮ. ಸತತ ಮೂರನೇ ಬಾರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹವಿರುವ ಚಿನ್ನದ ಅಂಬಾರಿಯನ್ನು ಹೊರಲು ಅರ್ಜುನ ಸಿದ್ಧವಾಗಿದ್ದಾನೆ.

ಸತತ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮನ ನಂತರ ಈ ಜವಾಬ್ದಾರಿಯು 2012ರಿಂದ ಅರ್ಜುನನ ಹೆಗಲಿಗೆ ಬಿದ್ದಿತು. ಆದರೆ, ಅರ್ಜುನನ ಕಂಡರೆ ಎಲ್ಲರೂ ಹೆದರುತ್ತಾರೆ. ಕಾರಣ ಆತ ತುಂಟ ಹಾಗೂ ಕೋಪಿಷ್ಠ. ಈ ಹೆದರಿಕೆ ಇದ್ದರೂ ಅಂಬಾರಿ ಹೊರಿಸಲಾಯಿತು. ಇದೀಗ ಸೈ ಎನಿಸಿಕೊಂಡಿದ್ದರೂ ಬಲರಾಮ ಅಂಬಾರಿ ಹೊರುತ್ತಿದ್ದಾಗ ಇಲ್ಲದ ಕಟ್ಟೆಚ್ಚರ ಈಗ ಹೆಚ್ಚಾಗಿ ತೆಗೆದುಕೊಳ್ಳುಲಾಗುತ್ತಿದೆ. ಅರ್ಜುನನಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಕಟ್ಟಲಾಗುತ್ತದೆ. ಈತನ ಸುತ್ತಮುತ್ತ ಕಮಾಂಡೋ ಪಡೆ ಇರುತ್ತದೆ.

ಹತ್ತಿರ ಅನಗತ್ಯವಾಗಿ ಯಾರೂ ಸುಳಿಯುವಂತಿಲ್ಲ. ನಾದಸ್ವರ ತಂವು ಸ್ವಲ್ಪ ದೂರದಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ಸೇರಿದಂತೆ ವಿಶೇಷ ರಕ್ಷಣಾ ತಂಡ ರಚನೆಯಾಗಿದೆ. ಈ ತಂಡದ ಬಳಿ ಆನೆ ಕಟ್ಟುವಂತಹ ಹಗ್ಗ, ಕಬ್ಬಿಣದ ಸರಪಳಿ, ಬೇಡಿ, ಅರಿವಳಿಕೆ ಮದ್ದು ಇನ್ನಿತರ ಉಪಕರಣಗಳು ಇರುತ್ತವೆ. ಆನೆಗಳು ರೊಚ್ಚಿಗೆದ್ದ ಸಂದರ್ಭದಲ್ಲಿ ಈ ತಂಡದವರು ಸರಪಳಿ, ಬೇಡಿ ಹಾಕಿ ನಿಯಂತ್ರಿಸಲು ಯತ್ನಿಸುತ್ತಾರೆ. ಇದು ಫಲ ನೀಡದಿದ್ದರೆ ಅರಿವಳಿಕೆ ಮದ್ದು ನೀಡಲಾಗುತ್ತದೆ.

ಅಂಬಾರಿ ಆನೆಗಳು: ಮೊದಲು ದ್ರೋಣ ಆನೆಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದ. 1997ರ ದಸರೆಯನ್ನು ಮುಗಿಸಿ ವಾಪಸ್ ಆನೆ ಶಿಬಿರಕ್ಕೆ ಹೋಗಿದ್ದ. ಈ ವೇಳೆ ಬಳ್ಳೆ ಅರಣ್ಯದಲ್ಲಿ ಸೊಪ್ಪು ತಿನ್ನಲು ಹೋಗಿ ಸೊಂಡಿಲಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ. ದ್ರೋಣನ ನಂತರ ಬಲರಾಮನ ಹೆಗಲಿಗೆ ಅಂಬಾರಿ ಹೊರುವ ಜವಾಬ್ದಾರಿ ಬಂತು. ಬಲರಾಮ ಆನೆಯು ಸತತ 14 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. 2012ರಲ್ಲಿ ಬಲರಾಮನಿಗೆ ನಿಶಕ್ತಿ ಕಾಡಿದ್ದರಿಂದ ಅರ್ಜುನನ ಹೆಗಲಿಗೆ ಅಂಬಾರಿ ಭಾರ ಬಂದಿದೆ.

ದಸರಾ ಗಜಪಡೆ: ಈ ಬಾರಿಯ ದಸರೆಯಲ್ಲಿ ಭಾಗವಹಿಸುವ ಮೂರು ತಂಡಗಳಲ್ಲಿ ಒಟ್ಟು 14 ಆನೆಗಳು ಮೈಸೂರಿಗೆ ಆಗಮಿಸಿವೆ. ಅರ್ಜುನ, ಬಲರಾಮ, ಅಬಿಮನ್ಯು, ಗಜೇಂದ್ರ, ಶ್ರೀರಾಮ, ವಿಕ್ರಮ, ಹರ್ಷ, ಗೋಪಿ, ಪ್ರಶಾಂತ, ಗೋಪಾಲಸ್ವಾಮಿ, ಮೇರಿ, ವರಲಕ್ಷ್ಮಿ, ದುರ್ಗಾಪರಮೇಶ್ವರಿ ಮತ್ತು ಕಾವೇರಿ ಆನೆಗಳು ಅರಮನೆ ಆವರಣದಲ್ಲಿ ಬಿಡಾರ ಹೂಡಿವೆ. ಅರ್ಜುನನಿಗೆ ಕುಮ್ಕಿ ಆನೆಗಳಾಗಿ ಮೇರಿ ಮತ್ತು ಕಾವೇರಿ.

-ಬಿ.ಶೇಖರ್ ಗೋಪಿನಾಥಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.