ಜಿಲ್ಲಾ ಸುದ್ದಿ

ಸರ್ಕಾರ ಕಾಣದ್ದನ್ನು ರವಿ ಕಂಡರು!

ಸರ್ಕಾರ ಕಾಣದ್ದನ್ನು ರವಿ ಕಂಡರು!
Published On :

ಕೋಲಾರ: ಸರ್ಕಾರಿ ಭೂಮಿ ಸಂರಕ್ಷಣೆ ಮತ್ತು ಅರ್ಹರಿಗೆ ಪಹಣಿ ಸಕ್ರಮಕ್ಕಾಗಿ ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ ಜಾರಿಗೆ ತಂದಿರುವ ಕಂದಾಯ ಅದಾಲತ್ ಮತ್ತು ಪೋಡಿ ಆಂದೋಲನವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಅನೇಕ ವರ್ಷಗಳಿಂದ ಇತ್ಯರ್ಥವಾಗದೇ ಇದ್ದ ಆಸ್ತಿ ವರ್ಗಾವಣೆ, ಖಾತೆ ಬದಲಾವಣೆ, ಕಂದಾಯ ಪಾವತಿ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ರವಿ ಕಂದಾಯ ಅದಾಲತ್ ಆಯೋಜಿಸಿದ್ದರು. ಇದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರಿಂದ ಉತ್ತೇಜನಗೊಂಡ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ಸರ್ಕಾರಿ ಭೂಮಿ  ಗುರುತಿಸಿ ಸಂರಕ್ಷಿಸಲು, ಅಕ್ರಮವಾಗಿ ಪಹಣಿ ಪಡೆದು ಭೂ ಸ್ವಾಧೀನದಲ್ಲಿ ಇಟ್ಟುಕೊಂಡವರಿಂದ ಭೂಮಿ ಹಿಂದೆ ಪಡೆಯಲು, ಭೂ ಮಂಜೂರಾತಿ, ಭೂಸ್ವಾಧೀನ, ಭೂ ಹದ್ದುಬಸ್ತು, ದರಕಾಸ್ತು ಭೂಮಿಯ ಮಾಹಿತಿ ಸಂಗ್ರಹಣೆಗಾಗಿ 2 ತಿಂಗಳ ಹಿಂದೆ ಪೋಡಿ ಆಂದೋಲನ ಆರಂಭಿಸಿದ್ದರು. ಇದು ಕೂಡಾ ಯಶಸ್ಸು ಕಂಡಿದೆ.

ಏನಿದು ಕಂದಾಯ ಅದಾಲತ್?: ಗ್ರಾಮೀಣ  ಜನತೆಯ ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇವೆ ತಲುಪಬೇಕು. ರೈತರು ತಮ್ಮ ಕೆಲಸಕ್ಕಾಗಿ ತಾಲೂಕು ಕಚೇರಿಗಳಿಗೆ ಅಲೆಯುವುದು ತಪ್ಪಬೇಕು. ಕಂದಾಯ ಇಲಾಖೆಯ ಆರ್ ಐ, ವಿಎ, ಭೂ ದಾಖಲೆ  ವಿಭಾಗದ ಅಧಿಕಾರಿ ವರ್ಗ, ಸಿಬ್ಬಂದಿಯಿಂದ ಬಡವರ ಕೆಲಸ ವಿಳಂಬವಾಗುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಪರಿಹಾರ ಪಡೆಯಲು ಕಂದಾಯ ಅದಾಲತ್ ಆಯೋಜಿಸಲಾಗಿತ್ತು.


ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು ಇತ್ತೀಚೆಗೆ ಶ್ರೀನಿವಾಸಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಂದಾಯ ಅದಾಲತ್, ಪೋಡಿ ಆಂದೋಲನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ನಾನು ಸಚಿವರನ್ನು ಭೇಟಿಯಾದ ಸಂದರ್ಭದಲ್ಲೂ ರಾಜ್ಯಾದ್ಯಂತ ಈ ಕಾರ್ಯಕ್ರಮಗಳನ್ನು ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳೂ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

ಕೋಲಾರ ಜಿಲ್ಲೆಯ ಹೋಬಳಿ ಕೇಂದ್ರಗಳಲ್ಲಿ ಮತ್ತು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದ್ದ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಏನಿದು ಪೋಡಿ ಆಂದೋಲನ?: ಭೂ ಸಮೀಕ್ಷಗೆ ಸರ್ವೇಯರ್‌ಗಳ ಕೊರತೆ ಇರುವುದನ್ನೇ ನೆಪ ಮಾಡಿಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಸರ್ಕಾರಿ ಭೂಮಿಯನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡು ಸರ್ಕಾರಕ್ಕೆ ವಂಚಿಸುತ್ತಿದ್ದರು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತಂದ ಹೊಸ ವ್ಯವಸ್ಥೆಯೇ ಪೋಡಿ ಆಂದೋಲನ. ಈ ಹಿಂದೆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಮನೋಜ್ ಕುಮಾರ್ ಮೀನಾ, ಡಾ.ಡಿ.ಎಸ್. ವಿಶ್ವನಾಥ್ ಅವರು ಸಹ ಸರ್ಕಾರಿ ಭೂಮಿಯನ್ನು ಹದ್ದುಬಸ್ತು ಮಾಡಲು ಚಿಂತನೆ ಮಾಡಿದ್ದರು.

ಆದರೆ ಸರ್ವೇಯರ್‌ಗಳ ಕೊರತೆ, ಈ ಹಿಂದಿನ ಸರ್ಕಾರ ಆಸಕ್ತಿ ತೋರದ ಕಾರಣ ಪೋಡಿಗಳ ಸಕ್ರಮಕ್ಕೆ ಹಿನ್ನಡೆ ಆಗಿತ್ತು. ಕೋಲಾರ ಜಿಲ್ಲಾಧಿಕಾರಿ ರವಿ ಅವರು 44 ಸರ್ವೇಯರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಸರ್ಕಾರಿ ಮತ್ತು ಖಾಸಗಿ ಜಮೀನುಗಳ ಹದ್ದುಬಸ್ತು, ದರಕಾಸ್ತು, ಭೂ ಪರಿವರ್ತನೆ, ಭಊ ಸ್ವಾಧೀನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಂದಾಯ ಇಲಾಖೆ, ಭೂ ದಾಖಲಾತಿ ಇಲಾಖೆಯಿಂದ ತರಿಸಿಕೊಂಡು ಪೋಡಿ ಆಂದೋಲನಕ್ಕೆ ಚಾಲನೆ ನೀಡಿ ಯಶಸ್ವಿಯಾಗಿದ್ದಾರೆ.

-ಡಿ.ಕೆ ರವಿ, ಕೋಲಾರ ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.