ಜಿಲ್ಲಾ ಸುದ್ದಿ

ಬೆಂಗಳೂರು ಸಿಬ್ಬಂದಿಗೆ ಯಾಹೂ ಶಾಕ್

ಬೆಂಗಳೂರು ಸಿಬ್ಬಂದಿಗೆ ಯಾಹೂ ಶಾಕ್
Published On :

ಬೆಂಗಳೂರು: ಬೆಂಗಳೂರು ಕಚೇರಿಯ ಕೆಲಸಗಾರರಿಗೆ ಅಂತರ್ಜಾಲ ತಂತ್ರಜ್ಞಾನ ದೈತ್ಯ ಯಾಹೂ ದೀಪಾವಳಿಯ ಶಾಕ್ ನೀಡಿದೆ. ಗೂಗಲ್‌ನ ಜನಪ್ರಿಯತೆ ಮುಂದೆ ಮಂಕಾಗುತ್ತಿರುವ ಯಾಹೂ ಈಗ ಬೆಂಗಳೂರಿನಲ್ಲಿರುವ ತನ್ನ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರದಿಂದ 400ಕ್ಕೂ ಹೆಚ್ಚು ಸಿಬ್ಬಂದಿಯನ್ನು ಅದರಲ್ಲೂ ಮುಖ್ಯವಾಗಿ ಪ್ರಾಡಕ್ಟ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ನ.7ರಿಂದ ಅನ್ವಯವಾಗುವಂತೆ ಈ ಸಿಬ್ಬಿಂದಿ ಕಡಿತ ಅನುಷ್ಠಾನಕ್ಕೆ ಬರಲಿದೆ. ಸಿಬ್ಬಂದಿ ಕಡಿತ ಸದ್ಯ ಭಾರತಕ್ಕೆ ಮಾತ್ರ ಸೀಮಿತವಾಗಿದೆ.

ವೆಚ್ಚ ಕಡಿತ ಮತ್ತು ಕಚೇರಿಗಳ ಸಂಖ್ಯೆ ಕಡಿತಗೊಳಿಸುವ ಭಾಗವಾಗಿ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ಸಿಬ್ಬಂದಿ ಕಡಿತದ ನಿರ್ಧಾರವನ್ನು ಯಾಹೂ ಕೂಡ ಖಚಿತಪಡಿಸಿದೆ. ಸಂಸ್ಥೆ ಈಗ ಸ್ಥಿರ ಬೆಳವಣಿಗೆ ಹಾದಿಯಲ್ಲಿದೆ. ಇದರ ಜತೆಗೆ ಹೆಚ್ಚಿನ ದಕ್ಷತೆ, ಸಹಭಾಗಿತ್ವ ಮತ್ತು ಆವಿಷ್ಕಾರವನ್ನೂ ಎದುರು ನೋಡುತ್ತಿದೆ. ಇದಕ್ಕಾಗಿ ಕಂಪನಿ ತನ್ನ ಬೆಂಗಳೂರು ಕಚೇರಿಯಲ್ಲಿ ಕೆಲ ಬದಲಾವಣೆ ಮಾಡಿ ಕೊಳ್ಳುತ್ತಿದೆ. ಇದರ ಭಾಗವಾಗಿ ಕೆಲವು ತಂಡಗಳನ್ನು ಒಗ್ಗೂಡಿಸಿ ಕೆಲವೇ ಕಚೇರಿಗಳಿಗೆ ಸೀಮಿತಿಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ, ಭಾರತ ಮತ್ತು ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಮುಂದುವರಿಸಲಿದೆ ಎಂಬುದನ್ನು ಕಂಪನಿ ಖಚಿತಪಡಿಸಿದೆ. ಕಳೆದ ತಿಂಗಳಷ್ಟೇ ಕಂಪನಿ ಯು ಕ್ಯಾಲಿಫೋರ್ನಿಯಾದ ಕಾರ್ಲ್‌ಸಾ ಬಾದ್‌ನ ತನ್ನ ಕಚೇರಿಯನ್ನು ಮುಚ್ಚಿತ್ತು. ಅಲ್ಲಿನ ಕೆಲ ಸಿಬ್ಬಂದಿಗೆ ಕಂಪನಿಯ ಸನ್ನಿವೇಲ್‌ನಲ್ಲಿರುವ ಕಚೇರಿಯಲ್ಲಿ ಪುನರ್ವಸತಿ ಕಲ್ಪಿಸಿತ್ತು. ಉಳಿದವರಿಗೆ ಐದರಿಂದ 10 ತಿಂಗಳ ವೇತನ ನೀಡಿ ಮನೆಗೆ ಕಳುಹಿಸಿತ್ತು.

ಭಾರತ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಹಾಗಾಗಿ ಭಾರತವನ್ನು ಪ್ರಮುಖ ಉದ್ಯಮ ಕೇಂದ್ರವಾಗಿ ಯಾಹೂ ಪರಗಣಿಸುತ್ತಿದೆ. ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂು ಕಂಪವಿ ಅನೇಕ ಸೇವೆಗಳನ್ನು ಪರಿಚಯಿಸಿದೆ. ಆದರೆ, ಸಾಮಾಜಿಕ ಜಾಲ ತಾಣ ಮತ್ತು ಮನೋರಂಜನಾ ಪೋರ್ಟ್‌ಲ್‌ಗಳು ನಿರೀಕ್ಷಿತ ಜನಪ್ರಿಯತೆ ಗಳಿಸದಿರುವ ಹಿನ್ನೆಲೆಯಲ್ಲಿ ಕಂಪನಿ ನಷ್ಟ ಅನುಭವಿಸಿದೆ. ಇಷ್ಟಾದರೂ ಮೊಬೈಲ್ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಸ್ಟಾರ್ಟ್ ಅಪ್‌ಗಳನ್ನು ಕೊಳ್ಳುವ ಪ್ರಕ್ರಿಯೆ ಮುಂದುವರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.