ಜಿಲ್ಲಾ ಸುದ್ದಿ

ಕೆಎಸ್‌ಆರ್‌ಟಿಸಿ ದರ ಇಳಿಕೆ ಇಲ್ಲ

ಕೆಎಸ್‌ಆರ್‌ಟಿಸಿ ದರ ಇಳಿಕೆ ಇಲ್ಲ
Published On :

ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರ ಸದ್ಯಕ್ಕೆ ಇಳಿಸುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬಿಎಂಟಿಸಿಯಿಂದ 57ನೇ ಬಸ್ ದಿನಾಚರಣೆ ಅಂಗವಾಗಿ ನಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅತ್ಯಲ್ಪ ಪ್ರಮಾಣದಲ್ಲಿ ಡೀಸೆಲ್ ದರ ಇಳಿಕೆಯಾಗಿದ್ದು, ದರ ಇಳಿಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. 2014 ರ ಏಪ್ರಿಲ್‌ನಿಂದ ಇದುವರೆಗೆ ಇಲಾಖೆ 30 ಕೋಟಿ ನಿವ್ವಳ ಲಾಭ ಗಳಿಸಿದ್ದು, ಇತ್ತೀಚೆಗಷ್ಟೇ ಇಲಾಖೆ ಚೇತರಿಕೊಂಡಿದೆ. ಆದ್ದರಿಂದ ಸದ್ಯ ಬಸ್‌ಗಳ ಪ್ರಯಾಣ ದರ ಕಡಿಮೆ ಮಾಡುವ ಬಗ್ಗೆ ಆಲೋಚನೆ ಮಾಡಿಲ್ಲ. ಸರ್ಕಾರಿ ನೌಕರರ ಭತ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥ್ಯಗಳ ಸಿಬ್ಬಂದಿ ವೇತನ ಮತ್ತು ಭತ್ಯೆ 900 ಕೋಟಿ ಹೆಚ್ಚಳವಾಗಿದೆ ಹಾಗಾಗಿ ಪ್ರಯಾಣ ದರ ಇಳಿಸುವುದು ಕಷ್ಟ ಎಂದರು.
ಸಿಲಿಕಾನ್ ಸಿಟಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಇತ್ತೀಚೆಗೆ ಈ ಬಗ್ಗೆ ಹೈ ಕೋರ್ಟ್ ಸಹ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗಾಗಿ ಹೆಚ್ಚಿರುವ ವಾಹನ ದಟ್ಟಣೆ ಹಾಗೂ ವಾಯುಮಾಲಿನ್ಯ ಕಡಿಮೆಗೊಲಿಸಲು ವೈಯಕ್ತಿಕ ವಾಹನಗಳ ಬದಲು ಸಮೂಹ ಸಾರಿಗೆ ಬಳಸಲು ಒತ್ತು ನೀಡಬೇಕು. ಸಾರಿಗೆ ವಾಹನ ಬಳಕೆಗೆ ತಾವೂ ಮುಂದಾಗಬೇಕು ಹಾಗೂ ಬೇರೆಯವರನ್ನೂ ಪ್ರೋತ್ಸಾಹಿಸಬೇಕು ಎಂದರು.
ಖಾಸಗಿ ವಾಹನ ಸ್ಥಳಾಂತರ: ನಗರದಲ್ಲಿ 40ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಹಾಗಾಗಿ ಶಬ್ಧ ಹಾಗೂ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾರಿಗೆ ಬಸ್‌ಗಳನ್ನು ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ವರ್ಗಾಯಿಸಲಾಗಿದೆ. ಬಹಳಷ್ಟು ವಾಹನಗಳು ಅಲ್ಲಿಂದಲೇ ತೆರಳಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ವಾಹನಗಳು ಮಾತ್ರ ಇನ್ನೂ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ ಹೋಗುತ್ತಿವೆ. ಅವುಗಳನ್ನೂ ಸಹ ಇಲ್ಲಿಂದ ಬೇಡೆಗೆ ಸ್ಥಳಾಂತರಿಸಲು ಖಾಸಗಿ ಬಸ್ ಮಾಲೀಕರ ಸಂಘದ ಮುಖಂಡರ ಜತೆ ಮಾತುಕತೆ ನಡೆಸಲಾಗುತ್ತಿದ್ದು, ಶೀಫ್ರದಲ್ಲೇ ಈ ಖಾಸಗಿ ಬಸ್ ಸಂಚಾರ ವ್ಯವಸ್ಥೆಯನ್ನು ಬೇರೆಡೆ ಕಲ್ಪಿಸಲಾಗುವುದು ಎಂದು ಹೇಳಿದರು.
ಇನ್ನು ಖಾಸಗಿ ಬಂಕ್‌ಗಳಿಂದ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಖರೀದಿಸಿರುವ ಡೀಸಲ್‌ನ ಬಾಕಿ ಹಣವನ್ನು ಉಳಿಸಿಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಂಧನ ಉಳಿತಾಯ ಮಾಡಿದ ಶಾಂತಿ ನಗರ, ಕೊತ್ತನೂರು ಸೇರಿದಂತೆ ನಾಲ್ಕು ವಿಭಾಗಗಳ ವ್ಯವಸ್ಥಾಪಕರಿಗೆ ಪ್ರಶಶ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಸಾಧನೆ ಮಾಡಿದ ಘಟಕಗಳಿಗೆ ಪಾರಿತೋಷಕ ನೀಡಲಾಯಿತು. ನಂತರ ಬಸ್ ಬಂತು ಬಸ್ ಎಂಬ ಬೀದಿ ನಾಟಕ ಪ್ರದರ್ಶಿಸಲಾಯಿತು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ್ ಕೌರ್, ನಟ ಧ್ರುವ ಸರ್ಜಾ, ನಟಿ ರೂಪಿಕಾ, ಗಾಯಕಿ ಡಾ.ಶಮಿತಾ ಮಲ್ನಾಡ್, ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್, ಬಿಬಿಎಂಪಿ ಸದಸ್ಯ ಉದಯ್ ಶಂಕರ್, ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು. ನಂತರ ನಟ ನಟಿಯರು ಶಾಂತಿನಗರದಿಂದ ಪಾಲಿಕೆ ವೃತ್ತದವರೆಗೆ ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ಸಾರಿಗೆ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.