ಜಿಲ್ಲಾ ಸುದ್ದಿ

ರಾಜಕೀಯ ದಾಳವಾಗಿ ರಾಜ್ಯಪಾಲರ ಬಳಸಲ್ಲ

ರಾಜಕೀಯ ದಾಳವಾಗಿ ರಾಜ್ಯಪಾಲರ ಬಳಸಲ್ಲ
Published On :

ಬೆಂಗಳೂರು: ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದಿಲ್ಲ. ಅಂತಹ ಆಸಕ್ತಿ ಪಕ್ಷಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ನನ್ನ ಅವಧಿಯಲ್ಲಿ ಹಿಂದಿನ ರಾಜ್ಯಪಾಲರು ನಡೆದುಕೊಂಡ ಪರಿ ಹಾಗೂ ಪ್ರತಿಪಕ್ಷಗಳ ವರ್ತನೆ ಬಗ್ಗೆ ಮಾತನಾಡುವುದಿಲ್ಲ. ಆದರೆ ಕಾಂಗ್ರೆಸ್‌ನವರಂತೆ ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುವ ಆಸಕ್ತಿ ನಮಗಿಲ್ಲ. ಆ ರೀತಿಯ ಯಾವುದೇ ಪ್ರಯತ್ನವನ್ನು ಪಕ್ಷ ಮಾಡುವುದಿಲ್ಲ. ರಾಜ್ಯಪಾಲರು ಅವರ ಕರ್ತವ್ಯ ನಿರ್ವಹಿಸುತ್ತಾರೆ ಎಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ತಿಳಿಸಿದರು.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಆತುರದ ನಿರ್ಣಯವಿಲ್ಲ. ಮಾಜಿ ಸಚಿವರಾದ ಸುರೇಶ್ ಕುಮಾರ್ ಹಾಗ ಸೋಮಣ್ಣ ನೇತೃತ್ವದ ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳತ್ತೇವೆ. ಆದರೆ ಯಾವುದೇ ಪ್ರತೀಕಾರದ ಕ್ರಮಗಳ ಬಗ್ಗೆ ಪಕ್ಷ ಚಿಂತನೆ ಮಾಡುವುದಿಲ್ಲ. ಬದಲಾಗಿ ಸರ್ಕಾರದ ನ್ಯೂನತೆಗಳನ್ನು ಕಾಲಕಾಲಕ್ಕೆ ರಾಜ್ಯಪಾಲರಿಗೆ ತಿಳಿಸುವುದು ಪ್ರತಿಪಕ್ಷವಾಗಿ ಬಿಜೆಪಿಯ ಕರ್ತವ್ಯ. ಅದನ್ನು ಸಮರ್ಪಕವಾಗಿ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ನಮೋ ಸರ್ಕಾರದ ಅನಿರೀಕ್ಷಿತ ಸಾಧನೆ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ 100 ದಿನಗಳಲ್ಲಿ ಅನಿರೀಕ್ಷಿತ ಸಾಧನೆ ಮಾಡಿದೆ. ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಕಾಣುತ್ತಿದೆ. ಕೇಂದ್ರ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಜನರಿಗೆ ತಿಳಿಯುತ್ತಿದೆ. ಜಿಡಿಪಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಉತ್ಪಾದನೆ ಹಾಗೂ ಬಂಡವಾಳ ಹೂಡಿಕೆ ವಲಯದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಯನ್ನು ಮೋದಿ ಸರ್ಕಾರ ಮಾಡಿದೆ. ಮುಂದಿನ 6 ತಿಂಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯಾಗಲಿದೆ. ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಒಳ್ಳೆಯ ದಿನಗಳು ಭಾರತೀಯರಿಗೆ ಸಿಗಲಿದೆ ಎಂದು ಅವರು ಹೇಳಿದರು.

ವಿಶೇಷವಾಗಿ ಜನಧನ ಯೋಜನೆ ಬಡವರು ಹಾಗೂ ಮಧ್ಯಮ ವರ್ಗದ ಪಾಲಿಗೆ ವರವಾಗಲಿದೆ. ಲೇವಾದೇವಿದಾರರಿಂದ ರಕ್ಷಣೆ ಸಿಗುತ್ತದೆ. ವಿಮೆ ಹಾಗೂ ಸಾಲ ಯೋಜನೆಗಳಿಗೆ ಇದು ರಹದಾರಿಯಾಗುತ್ತದೆ. ಭವಿಷ್ಯದಲ್ಲಿ ಇಂತಹ ಮತ್ತಷ್ಟು ಯೋಜನೆಗಳು ಜನರಿಗೆ ಸಿಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿಗೆ ಸಿಎಂ ಮುಂದಡಿ ಇಡಲಿ:

ರಾಜ್ಯದ ಅಭಿವೃದ್ಧಿಗೆ ಸಂಸದರು ಹಾಗೂ ಮಂತ್ರಿಗಳು ಬದ್ಧರಾಗಿದ್ದಾರೆ. ಬಾಕಿ ಹಾಗೂ ಹೊಸ ಯೋಜನೆಗಳ ಕುರಿತಂತೆ ಮೋದಿ ಜತೆ ಚರ್ಚೆಗೆ ಸಿದ್ಧ ಎಂದು ಮೊದಲ ದಿನವೇ ಮುಖ್ಯಮಂತ್ರಿಗೆ ಹೇಳಿದ್ದೇವೆ. ಆದರೆ ಮುಂದಡಿ ಇಟ್ಟು ಸಂಸದರು ಹಾಗೂ ಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರದೊಂದಿಗೆ ವ್ಯವಹರಿಸುವುದು ಸಿಎಂ ಜವಾಬ್ದಾರಿ. ಆದರೆ ಮೋದಿ ಸರ್ಕಾರ ಹಿಂದಿನ ಸರ್ಕಾರಗಳಂತೆ ಪಕ್ಷಪಾತ ಮಾಡುವುದಿಲ್ಲ. ಪಕ್ಷಾತೀತವಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಯಡಿಯೂರಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.