

ಬೆಂಗಳೂರು: ಸರ್ಕಾರಿ ನೌಕರರು ಕಚೇರಿ ಅವಧಿಯಲ್ಲೇ ಅಸಡ್ಡೆಯಿಂದಿರುವುದು, ಸೋಮಾರಿಗಳಾಗಿ ಇರುವುದು ಸಾರ್ವಕಾಲಿಕ ಆರೋಪ. ಆದರೆ, ಇದಕ್ಕೆ ಅಪವಾದವೆಂಬಂತೆ ರಜಾ ದಿನವಾದ ಭಾನುವಾರವೂ ರಾಜ್ಯದ ಶಕ್ತಿಕೇಂದ್ರ ವಿಧಾನನೌಧದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಿ ಅಚ್ಚರಿ ಮೂಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಪ್ಪಣೆಯೇ ಈ ಸಂಡೆ ವರ್ಕ್ಗೆ ಕಾರಣ. ಈ ಹಿನ್ನೆಲೆಯಲ್ಲಿ ಭಾನುವಾರ ಭಾರಿ ಕಡತ ಯಜ್ಞವೂ ನಡೆಯಿತು.
ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಶಿಕ್ಷಣ, ನಗರಾಭಿವೃದ್ಧಿ, ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಸಹಕಾರ ಇಲಾಖೆಯ ಬಾಕಿ ಕಡತಗಳನ್ನು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಉಸ್ತುವಾರಿಯಲ್ಲಿ ಭಾನುವಾರ ವಿಲೇವಾರಿ ಮಾಡಲಾಯಿತು. ಮೂರು ದಿನಗಳಿಂದ ನಡೆಯುತ್ತಿರುವ ಈ ಕಾರ್ಯಕ್ಕೆ ರಜಾ ದಿನ ಭಾನುವಾರವೂ ಬಿಡುವಿರಲಿಲ್ಲ. ಬದಲಾಗಿ ಮತ್ತಷ್ಟು ವೇಗ ನೀಡಲಾಗಿತ್ತು.
ಕಡತ ವಿಲೇವಾರಿ ವಿಳಂಬ ಕುರಿತಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಕ್ಷೇಪಿಸಿದ್ದರು. ಸಚಿವ ಸಂಪುಟದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿ ಸಚಿವರು ವಾರದಲ್ಲಿ ಎರಡು ದಿನ ವಿಧಾನಸೌಧದಲ್ಲಿ ಕುಳಿತು ಕಡತ ವಿಲೇವಾರಿ ಮಾಡಬೇಕು ಎಂದು ಸಿಎಂ ಸೂಚಿಸಿದ್ದರು. ಅಲ್ಲದೆ ಬಾಕಿ ಕಡತ ವಿಲೇವಾರಿ ಆಗುವವರೆಗೆ ಭಾನುವಾರವೂ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.
ಈ ಆದೇಶ ಪಾಲನೆಗೆ ಮುಂದಾಗಿರುವ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಎಲ್ಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು. ಭಾನುವಾರ ಸಾರ್ವಜನಿಕರು ಬಾರದ ಹಿನ್ನೆಲೆಯಲ್ಲಿ ಕೆಲಸವೂ ತೀವ್ರಗತಿಯಲ್ಲಾಗುತ್ತದೆ ಎಂದು ಆದೇಶದಲ್ಲಿ ಸೂಚಿಸಿದ್ದರು. ಇದಕ್ಕೆ ಸ್ಪಂದಿಸಿದ 6 ಇಲಾಖೆ ಅಧಿಕಾರಿಗಳು ದಿನವಿಡಿ ಕೆಲಸ ಮಾಡಿದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಡತ ವಿಲೇವಾರಿ ಬಗ್ಗೆ ಆಕ್ಷೇಪ ಕೇಳಿಬಂದಿದ್ದವು. ಶಿಕ್ಷಣ ಹಾಗೂ ಕಂದಾಯ ಇಲಾಖೆ ಸೇರಿ ಕೆಲವು ಇಲಾಖೆಗಳ ಕಾರ್ಯ ವಿಳಂಬ ಕುರಿತಂತೆ ಸ್ವತಃ ಮುಖ್ಯಮಂತ್ರಿ ಅಸಮಾಧಾನ ಹೊರಹಾಕಿದ್ದರು. ವಿಧಾನಸಭೆ ಹಾಗೂ ಪರಿಷತ್ನಲ್ಲಿ ಆಡಳಿತ ಪಕ್ಷದ ಸದಸ್ಯರೇ ಪರೋಕ್ಷವಾಗಿ ಕಿಡಿಕಾರಿದ್ದರು. ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿತ್ತು.
50 ಸಾವಿರ ಕಡತ ವಿಲೇವಾರಿ: ಈ ಆರು ಇಲಾಖೆಗಳಲ್ಲಿಯೇ 1 ಲಕ್ಷಕ್ಕೂ ಅಧಿಕ ಕಡತಗಳು ಬಾಕಿ ಇವೆ, ಕೂಡಲೇ ವಿಲೇವಾರಿ ಮಾಡಲು ಹಿಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಆದೇಶವನ್ನೂ ಹೊರಡಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿರುವ ಪ್ರಕಾರ, ಮೂರು ದಿನದಿಂದ ನಡೆದ ಕಾರ್ಯದಲ್ಲಿ ಸುಮಾರು 50 ಸಾವಿರ ಕಡತ ವಿಲೇವಾರಿಯಾಗಿದೆ ಎಂದರು.