ಏಕ ಪರೀಕ್ಷೆಯೋ, ಶುಲ್ಕ ರಿಯಾಯ್ತಿಯೋ?

ಬೆಂಗಳೂರು: ವೃತ್ತಿ ಶಿಕ್ಷಣಕ್ಕೆ ಏಕ ಪರೀಕ್ಷೆ ಅಥವಾ ಶುಲ್ಕದಲ್ಲಿ ರಿಯಾಯಿತಿ. ಇವೆರಡರಲ್ಲಿ ಒಂದನ್ನು ಮಾತ್ರ ನೀಡಲು ಸಾಧ್ಯ ಎಂದು ವೈದ್ಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವೃತ್ತಿ ಶಿಕ್ಷಣ ಸಂಸ್ಥೆಗಳ ಶುಲ್ಕ, ಪ್ರವೇಶ ನಿಯಂತ್ರಣ ಕಾಯಿದೆ-2006ನ್ನು ತಿದ್ದುಪಡಿ ಮಾಡಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. ಆದರೆ, ವೃತ್ತಿ ಶಿಕ್ಷಣ ಪ್ರವೇಶಕ್ಕೆ ಸರ್ಕಾರಿ-ಖಾಸಿಗೆ ಕಾಲೇಜುಗಳಿಗೆ ಏಕ ಪ್ರವೇಶ ಪರೀಕ್ಷೆ ಮಾಡಿದರೆ, ಈಗ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ನೀಡಲಾಗುತ್ತಿರುವ ರಿಯಾಯಾತಿಯನ್ನೂ ನೀಡಲಾಗುವುದಿಲ್ಲ ಎರಡರಲ್ಲಿ ಒಂದನ್ನು ಮಾತ್ರ ಒದಗಿಸಬಹುದು. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಂತಿಮ ಘಟ್ಟಕ್ಕೆ ತಲುಪುತ್ತಿವೆ ಎಂದು ಮಂಗಳವಾರ ತಿಳಿಸಿದರು.
ಎಲ್ಲರೂ ಒಂದೇ ರೀತಿಯ ಪ್ರವೇಶ ಪರೀಕ್ಷೆ ಮಾಡಿದರೆ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕಾಗುತ್ತದೆ. ಆಗ ಸರ್ಕಾರ ಶುಲ್ಕದಲ್ಲಿ ರಿಯಾಯಿತಿ ನೀಡಲು ಸಾಧ್ಯವಾಗುವುದಿಲ್ಲ. ಶುಲ್ಕರಿಯಾಯಿತಿ ಬೇಕು ಎಂದಾದರೆ ಈಗಿರುವ ಸರ್ಕಾರಿ-ಖಾಸಗಿ ಕೋಟಾವನ್ನೇ ಮುಂದವರಿಸಲೇ ಬೈಕಾಗುತ್ತದೆ. ಈ ಹಿಂದಿನ ಸರ್ಕಾರ ರೂಪಿಸಿದ್ದ 2006ರ ಕಾಯಿದೆಯನ್ನು ನಾವು ಜಾರಿಗೊಳಿಸಲು ಮುಂದಾದಾಗ ಶುಲ್ಕ ಹೆಚ್ಚಾಗುತ್ತದೆ ಎಂದು ವಾದಿಸಲಾಗಿತ್ತು. ಆದ್ದರಿಂದ ಈವರೆಗೆ ನಡೆದಿರುವ ಚರ್ಚೆಯಂತೆ ಏಕ ಪ್ರವೇಶ ಪರೀಕ್ಷೆ ಅಥವಾ ಶುಲ್ಕ ರಿಯಾಯಿತಿ ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದರು.
2006ರ ಕಾಯಿದೆಗೆ ತಿದ್ದುಪಡಿ ತರಲು ಪ್ರತಿಪಕ್ಷ ನಾಯಕರು, ಶಾಸಕರು, ಶಿಕ್ಷಣ ತಜ್ಞರು, ಸಂಘ-ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇನ್ನೂ ಕೆಲವರೊಂದಿಗೆ ಚರ್ಚೆ ಬಾಕಿ ಉಳಿದಿದೆ. ಈಗ ತಿದ್ದುಪಡಿಗೆ ಒಂದು ರೂಪ ದೊರೆತಿದ್ದು, ಆದಷ್ಟು ಶೀಘ್ರ ಅದನ್ನು ಅಂತಿಮಗೊಳಿಸಲಾಗುತ್ತದೆ. ನವೆಂಬರ್ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡಿಸಲಾಗುತ್ತದೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
2016-17ಕ್ಕೆ ಮೂರು ವೈದ್ಯ ಕಾಲೇಜು:
ರಾಜ್ಯದಲ್ಲಿ ಆರು ವೈದ್ಯ ಕಾಲೇಜುಗಳು 2014-15ಕ್ಕೆ ಆರಂಭವಾಗಬೇಕಿತ್ತು. ಮೂಲಸೌಕರ್ಯ ಇಲ್ಲದ್ದರಿಂದ ಆಗಲಿಲ್ಲ. ಮಡಿಕೇರಿ, ಕಾರವಾರ, ಚಾಮರಾಜನಗರದಲ್ಲಿ ವೈದ್ಯ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಇನ್ನುಳಿದ 3 ಕಾಲೇಜುಗಳು ಮುಂದಿನ ವರ್ಷ ಆರಂಭವಾಗಲಿವೆ. 1016-17ರಲ್ಲಿ ಬಾಗಲಕೋಟೆ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಯಾದಗಿರಿ, ಹಾವೇರಿಯಲ್ಲಿ ವೈದ್ಯ ಕಾಲೇಜು ಆರಂಭಿಸುವ ಉದ್ದೇಶವಿದೆ. ಇದರಲ್ಲಿ ಬಾಗಲಕೋಟೆ, ತುಮಕೂರು, ಚಿತ್ರದುರ್ಗದಲ್ಲಿ 2016-17 ರಲ್ಲಿ ಕಾಲೇಜು ಆರಂಭಿಸಲು ಅರ್ಜಿ ಸಲ್ಲಿಸಲಾಗುತ್ತದೆ. ಉಳಿದವು ಇನ್ನೊಂದು ವರ್ಷ ವಿಳಬಂವಾಗಲಿದೆ ಎಂದೂ ತಿಳಿಸಿದರು.
ನಾಲ್ಕು ಕಂದಾಯ ವಿಭಾಗಗಳಲ್ಲಿ ಜಯದೇವ ಹೃದ್ರೋಗ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತದೆ. ಮೈಸೂರಿನಲ್ಲಿ 300 ಹಾಸುಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣ ಆರಂಭವಾಗಿದ್ದು, ಇನ್ನೆರಡು ವರ್ಷದಲ್ಲಿ ಮುಗಿಯಲಿದೆ. ಹುಬ್ಬಳ್ಳಿ, ಗುಲ್ಬರ್ಗದಲ್ಲೂ ನಿರ್ಮಿಸಲಾಗುತ್ತದೆ. ಇಧಲ್ಲದೆ ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಸಮಗ್ರ ಯೋಜನಾ ವರದಿ ತಯಾರಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆ ಎಚ್ಎಸ್ಸಿಸಿಗೆ ವಹಿಸಲಾಗಿದೆ. ಇದಕ್ಕೂ 2 ವರ್ಷದ ಅಗತ್ಯವಿದೆ. ಆದರೆ, ರಾಯಚೂರಿನಲ್ಲಿ ಒಪೆಕ್ ಆಸ್ಪತ್ರೆ ಇನ್ನಾರು ತಿಂಗಳಲ್ಲಿ ಕಾರ್ಯಗತವಾಗಲಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


