ಜಿಲ್ಲಾ ಸುದ್ದಿ

'ಡಿ' ಗ್ರೂಪ್ ಹುದ್ದೆಗೆ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರು!

'ಡಿ' ಗ್ರೂಪ್ ಹುದ್ದೆಗೆ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರರು!
Published On :

ಬಾಗಲಕೋಟೆ: ಅವರೆಲ್ಲ ಎಂಜಿನಿಯರ್ಗಳು, ಸ್ನಾತಕೋತ್ತರ ಪದವೀಧರರು. ಗ್ರೇಡ್-2 ಹುದ್ದೆ ಕನಸು ಕಾಣುತ್ತಿದ್ದವರು ಠಾಕುಠೀಕಾಗಿ ಕಚೇರಿ ಪ್ರವೇಶಿಸಿದಾಗಲೇ ಗೊತ್ತಾದದ್ದು, ತಾವು ಆಯ್ಕೆಯಾಗಿದ್ದು ಶೌಚಾಲಯ ಸ್ವಚ್ಛಗೊಳಿಸುವ ಕೆಸಲಕ್ಕೆ ಎಂದು!

ಎಂಜಿನಿಯರಿಂಗ್ ಪದವೀಧರರು ಇಂತಹ ಹುದ್ದೆಗೆ ಅರ್ಜಿ ಸಲ್ಲಿಸುವ ಸ್ಥಿತಿ ಇದೆಯಲ್ಲ ಎಂದು ಮರುಗುವುದೋ, ವಿದ್ಯಾವಂತರನ್ನೇ ಬೇಸ್ತು ಬೀಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಣತನ ಹೊಗಳುವುದೊ? ವಾಸ್ತವವಾಗಿ ಅದು ಡಿ ಗ್ರೂಪ್ ಹುದ್ದೆ. ಎಂಜಿನಿಯರಿಂಗ್, ಸ್ನಾತಕೋತ್ತರ ಪದವೀಧರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಕಚೇರಿ ಕಸ ಹೊಡೆಯುವುದು, ಶೌಚಾಲಯ ಸ್ವಚ್ಛ ಮಾಡುವ ಉದ್ಯೋಗವೆಂಬುದು ಗೊತ್ತಾಗುತ್ತಿದ್ದಂತೆ ಪಲಾಯನಗೈದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ 2,323 ಡಿ ಗ್ರೂಪ್ ನೌಕರರ ಹುದ್ದೆ ಭರ್ತಿ ಮಾಡಿಕೊಳ್ಳುವ ಸಂಬಂಧ ವಿಶೇಷ ನೇಮಕಾತಿ ಸಮಿತಿ ರಚಿಸಿ ಮೇ 31, 2012ರಂದು ಆದೇಶ ಹೊರಡಿಸಿತು. ಡಿ ಗ್ರೂಪ್ ಹುದ್ದೆಗೆ ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-2 ಎಂದು ಹೆಸರಿಸಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿತು. ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್ಎಸ್ಎಲ್ಸಿ ಹಾಗೂ ವೇತನ ರು. 14,550 ಎಂದು ನಮೂದಿಸಿ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕ, ಮೀಸಲಾತಿ ಆಧಾರದ ಮೇಲೆ ನೇಮಕ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಹುದ್ದೆಯ ಸ್ವರೂಪ ಯಾವುದೆಂದು ಅರ್ಥ ಮಾಡಿಕೊಳ್ಳುವ ಅಭ್ಯರ್ಥಿಗಳು ಗ್ರೇಡ್-2 ಎಂಬುದನ್ನು ನೋಡಿಯೇ ಮುಗಿ ಬಿದ್ದು ಅರ್ಜಿ ಸಲ್ಲಿಸಿದರು. ಲಕ್ಷಾಂತರ ಅರ್ಜಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುಡ್ಡೆಯಾದವು. ಅಚ್ಚರಿಯೆಂದರೆ ಎಂಜಿನಿಯರಿಂಗ್ ಪದವೀಧರರು, ಎಂಎ, ಎಂಎಸ್ಸಿ, ಎಂಕಾಂ ಮಾಡಿದವರೆಲ್ಲ ಅರ್ಜಿ ಸಲ್ಲಿಸಿದ್ದರು. ಎಸ್ಎಸ್ಎಲ್ಸಿಯಲ್ಲಿ ಶೇಕಡಾ 80 ರಿಂದ 90 ರಷ್ಟು ಅಂಕ ಪಡೆದವರೂ ಅರ್ಜಿ ಗುಜರಾಯಿಸಿದ್ದರು.
ಪಟ್ಟಿ ಪ್ರಕಟ: ಅರ್ಜಿಗಳನ್ನೆಲ್ಲ ವಿಂಗಡಣೆ ಮಾಡಿ, ಮೀಸಲಾತಿ ನಿಗದಿಪಡಿಸಿ, ಮಾನದಂಡ ಅಳವಡಿಸಿ ನೇಮಕ ಆದೇಶ ನೀಡುವಷ್ಟರಲ್ಲಿ ಒಂದು ವರ್ಷ ದಾಟಿತ್ತು. ಅಕ್ಟೋಬರ್ 27, 2013 ರಂದು ಆಯ್ಕೆಯಾದರವ ಪಟ್ಟಿಯನ್ನು ಆನ್ಲೈನ್ನಲ್ಲಿ ಪ್ರಕಟಿಸಿದ ಇಲಾಖೆ, ನಂತರ ಎಲ್ಲರಿಗೂ ಆದೇಶ ನೀಡಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿತು. ಆದೇಶ ಕೈಯಲ್ಲಿ ಹಿಡಿದು ಇನ್ಶರ್ಟ್ ಮಾಡಿಕೊಂಡು ಸ್ಟೈಲ್ ಆಗಿ ರಿಪೋರ್ಟ್ ಮಾಡಿಕೊಳ್ಳಲು ಹೋದಾಗ ಎಲ್ಲರಿಗೂ ಬೇರೆಯದೇ ಅನುಭವವಾಗಿದೆ.
ನಾವು ಮಾಡಬೇಕಾದ ಉದ್ಯೋಗ ನೀಟಾಗಿ ಡ್ರೆಸ್ ಹಾಕಿಕೊಳ್ಳುವುದಲ್ಲ. ಬದಲಾಗಿ ಯೂನಿಫಾರಂ ಹಾಕಿಕೊಂಡು ಕಸ ಹೊಡೆಯುವುದು, ಶೌಚಾಲಯ ಸ್ವಚ್ಛಗೊಳಿಸುವುದು ಎಂಬುದು ಅರಿವಿಗೆ ಬಂದಿದೆ.
ನಂತರ ಉಸ್ಸಪ್ಪಾ ಎಂದು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲವರು ಕರ್ತವ್ಯಕ್ಕೆ ವರದಿ ಮಾಡಿಕೊಂಡು ನಂತರ ಆಸ್ಪತ್ರೆ ಕಡೆ ತಿರುಗಿಯೂ ನೋಡಿಲ್ಲ.
ಗ್ರೇಡ್-2 ಎಂಬ ಶಬ್ದ ಸೃಷ್ಟಿಸಿದ ಅವಾಂತರ ಇದಾಗಿತ್ತು. ಅಂತಿಮವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಹೊರ ಗುತ್ತಿಗೆ ಆಧಾರದ ಮೇಲೆ ಸ್ಥಳೀಯವಾಗಿಯೇ ನೇಮಕ ಮಾಡುವಂತೆ ಸೂಚಿಸಿತು.


- ಚಿಕ್ಕಪ್ಪನಹಳ್ಳಿ ಷಣ್ಮುಖ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.