

ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕೆದಕಿದಷ್ಟು ಅಕ್ರಮಗಳು ಬೆಳಕಿಗೆ ಬರುತ್ತಿವೆ. ಇದೀಗ ನೀರು ನಿರ್ವಹಣೆಯ ಗುತ್ತಿಗೆ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗಿದೆ.
ಎಲ್ಲ ದಾಖಲೆಗಳೊಂದಿಗೆ ಕಾರ್ಮಿಕರೇ ಲೋಕಾಯುಕ್ತಕ್ಕೆ ಮೊರೆ ಹೋಗಿದ್ದಾರೆ. ಇಲ್ಲದ ಕಾರ್ಮಿಕರ ಹೆಸರಿನಲ್ಲಿ ವೇತನ ಪಾವತಿಸಲಾಗಿದೆ ಎನ್ನುವುದೇ ಇವರ ಆರೋಪ. ಆದರೆ ಅಧಿಕಾರಿಗಳು ಪ್ರಕರಣದ ದಾರಿ ತಪ್ಪಿಸುವ ತಂತ್ರ ಮಾಡುತ್ತಿದ್ದಾರೆ.
1,100 ಕಾರ್ಮಿಕರು
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ (ರಾಯಚೂರು, ಕೊಪ್ಪಳ, ಬಳ್ಳಾರಿ) ಜಲಾಶಯ ಪ್ರಾರಂಭವಾದಗಿನಿಂದಲೂ ನಿತ್ಯವೂ 1,100 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಆದರೆ, ಇದುವರೆಗೂ 1,876 ಕಾರ್ಮಿಕರ ಹೆಸರಿನಲ್ಲಿ ವೇತನ ಪಾವತಿ ಮಾಡಲಾಗಿದೆ. ಇಲ್ಲದ ಹೆಸರು, ಹ್ಯಾಂಡ್ ರಸೀದಿ ಮೇಲೆ ಮನಸೋ ಇಚ್ಛೆ ಹೆಸರು ಬರೆದು ವೇತನ ಪಾವತಿಸಿಕೊಂಡಿದ್ದು, ಕೋಟ್ಯಂತರ ರುಪಾಯಿ ಹೊಡಿದಿದ್ದಾರೆ.
ಈ ಎಲ್ಲ ದಾಖಲೆ ಸಂಗ್ರಹ ಮಾಡಿರುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಟಾಸ್ಕ್ ವರ್ಕ್ ನೌಕರರ ಸಂಘದ ಗೌರಾವಧ್ಯಕ್ಷ ಪಂಪಾಪತಿ ರಾಟಿ, ಸಮಗ್ರ ತನಿಖೆಗೆ ಆಗ್ರಹಿಸಿದ್ದು, ಲೋಕಾಯುಕ್ತರಿಗೆ ದೂರು ನೀಡಿದ್ದಾಗಿ ಹೇಳುತ್ತಾರೆ.
ಮುಚ್ಚಿ ಹಾಕುವ ಹುನ್ನಾರ
ಈಗ ಈ ಅಕ್ರಮ ಮುಚ್ಚಿಹಾಕುವ ಹುನ್ನಾರ ನಡೆದಿದೆ. ಯಾವಾಗ ಕಾರ್ಮಿಕರು ಎಚ್ಚೆತ್ತು ಹೋರಾಟ ಪ್ರಾರಂಭಿಸಿದರೋ ಅವರನ್ನು ಎತ್ತಂಗಡಿ ಮಾಡುವ ಷಡ್ಯಂತ್ರ ನಡೆದಿದೆ.
ಇದಕ್ಕಾಗಿಯೇ ಇದುವರೆಗೆ ಇಲ್ಲದ ಕಾನೂನು ಈಗ ಜಾರಿಗೆ ತಂದು, ಇದುವರೆಗೂ ಇದ್ದ ಗುತ್ತಿಗೆ ಕಾರ್ಮಿಕರನ್ನು ತೆಗೆದು ಹಾಕಿ, ಈಗ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳುವ ಸಂಚು ನಡೆಸಲಾಗುತ್ತಿದೆ.
ಈಗಿರುವ ಗುತ್ತಿಗೆ ನೌಕರರನ್ನು ತೆಗೆದು ಹಾಕುವುದಿಲ್ಲ. ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸಮರ್ಥನೆ ಮಾಡಿಕೊಳ್ಳಲಾಗುತ್ತಿದೆ.
ಸುಮಾರು 30-40 ವರ್ಷಗಳಿಂದ ದುಡಿಯುತ್ತ ಬಂದಿರುವ ಗುತ್ತಿಗೆ ಕಾರ್ಮಿಕರನ್ನು ತೆಗೆಯುವ ಅಧಿಕಾರಿಗಳ ಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೂರು ಜಿಲ್ಲೆಯ ವ್ಯಾಪ್ತಿಯ ನೌಕರರು ಆಯಾ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸೋಮರಡ್ಡಿ ಅಳವಂಡಿ