ಮೈತ್ರಿಯಾ ಆರೋಪ ಸುಳ್ಳು

ನಟಿ ಮೈತ್ರಿಯಾ ತನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ...
ಮೈತ್ರಿಯಾ ಆರೋಪ ಸುಳ್ಳು
Updated on: 

ಬೆಂಗಳೂರು: ನಟಿ ಮೈತ್ರಿಯಾ ತನ್ನ ಮೇಲೆ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಹೇಳಿದ್ದಾರೆ.

ತಮ್ಮ ವಿರುದ್ಧ ದೂರು ದಾಖಲಾದ ನಂತರ ಮಾಧ್ಯಮಗಳ ಕೈಗೆ ಸಿಗದೆ ಕದ್ದುಮುಚ್ಚಿ ಓಡಾಡುತ್ತಿದ್ದ ಕಾರ್ತಿಕ್‌ಗೌಡ ಇದೇ ಮೊದಲ ಬಾರಿಗೆ ಮಾಧ್ಯಮಗಳ ಜತೆ ಮಾತನಾಡಿದ್ದು, ಮೈತ್ರಿಯಾ ಜತೆಗಿನ ಸಂಬಂಧ ಹಾಗೂ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ ಸಹಿ ಹಾಕಲು ಆರ್.ಟಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಕಾರ್ತಿಕ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಆಕೆಯೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಹೀಗಿರುವಾಗ ಅತ್ಯಾಚಾರ, ಅಪಹರಣ ಎಲ್ಲವೂ ಸುಳ್ಳು. ನಮ್ಮ ತಂದೆಯ ಮರ್ಯಾದೆ ಕಳೆಯಲು ಆಕೆ ಈ ರೀತಿ ಮಾಡಿದ್ದಾಳೆ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಆರೋಪಮುಕ್ತನಾಗುವ ಭರವಸೆ ಇದೆ ಎಂದರು. ಮಂಗಳೂರಿನ ಮನೆಗೆ ಕರೆದೊಯ್ದು ಅರಿಶಿನ ಕೊಂಬು ಕಟ್ಟಿದ್ದಾಗಿ ಮೈತ್ರಿಯಾ ಆರೋಪಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾರ್ತಿಕ್, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಹೀಗಾಗಿ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಮೈತ್ರಿಯಾ ಸಲ್ಲಿಸಿದ್ದ ಅತ್ಯಾಚಾರ ದೂರ ಸಂಬಂಧ ಕಾರ್ತಿಕ್‌ಗೆ ಜಾಮೀನು ನೀಡಿದ ನ್ಯಾಯಾಲಯ ಪ್ರತಿ ತಿಂಗಳು 15 ಹಾಗೂ 30 ರಂದು ಪೊಲೀಸ್ ಠಾಣೆಗೆ ಹಾಜರಾಗಬೇಕು ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿತ್ತು.

ಹಾಗಾಗಿ ಕಾರ್ತಿಕ್ ಬೆಳಗ್ಗೆ ತಮ್ಮ ವಕೀಲರ ಜತೆ ಎಸಿಪಿ ಓಂಕಾರಯ್ಯ ಅವರ ಕಚೇರಿಗೆ ಆಗಮಿಸಿ ಸಹಿ ಹಾಕಿ ಹಿಂತಿರುಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com