

ಕುಂದಾಪುರ: ಆಪರೇಶನ್‌ಗೆ ಅಂತ ಹೋದ್ರೆ ಸೂಜಿನೋ, ಕತ್ತರಿನೋ ಬಿಡೋದು ಈ ವೈದ್ಯ ಯುಗದಲ್ಲಿ ಕಾಮನ್. ಆದ್ರೆ ಟವೆಲ್‌ಗೆ ಟವೆಲ್ ಅನ್ನೇ ಬಿಟ್ರೇ! ಹೌದು, ಇಲ್ಲಿನ ಶ್ರೀದೇವಿ ಆಸ್ಪತ್ರೆ ಇಂಥದ್ದೊಂದು ದಿವ್ಯ ನಿರ್ಲಕ್ಷ್ಯದ ಕೆಲಸ ಮಾಡಿದೆ.
ಆಗಿದ್ದಿಷ್ಟು, ಬೆಂಗಳೂರಿನಲ್ಲಿ ವಾಸವಿರುವ ತಾಲೂಕಿನ ಕೆದೂರು ಶಾನಾಡಿ ನಿವಾಸಿ ಸುಲೋಚನಾ ಶೆಟ್ಟಿ(36) ಹೆರಿಗೆಗೆಂದು ಕುಂದಾಪುರದ ಶ್ರೀದೇವಿ ಆಸ್ಪತ್ರೆಗೆ ಜೂ.24ರಂದು ದಾಖಲಾಗಿದ್ದರು. ಮರುದಿನ ಹೆರಿಗೆಯೂ ಆಯಿತು. ಬಳಿಕ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಒಂದು ವಾರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಉಳಿದಿದ್ದರು.
ಇದಕ್ಕೇಲ್ಲಾ ಆಸ್ಪತ್ರೆ ಪೀಕಿದ್ದು ಬರೋಬ್ಬರಿ ರು.40 ಸಾವಿರ!
ಆಪರೇಶನ್ ಮುಗಿಸಿಕೊಂಡು ಮನೆಗೆ ಹೋದ ಕೆಲವೇ ದಿನಗಳಲ್ಲಿ ಸುಲೋಚನಾ ಅವರಿಗೆ ತೀವ್ರ ಹೊಟ್ಟೆ ನೋವು ಹಾಗೂ ದುರ್ನಾತದಿಂದ ಕೂಡಿದ ರಕ್ತಸ್ರಾವ ಆರಂಭವಾಯಿತು. ಈಗ ಮನೆಯವರು ಕುಂದಾಪುರದ ಸ್ಕ್ಯಾನಿಂಗ್ ಸೆಂಟರ್‌ಗೆ ಕರೆದೊಯ್ದು ಪರೀಕ್ಷೆ ಮಾಡಿಸಿದರು. ಅಲ್ಲಿ ಬ್ಲಡ್ ಪ್ಲಾಟಿಂಗ್ ಎಂಬ ವರದಿ ನೀಡಿ ಅವರನ್ನು ವಾಪಸ್ ಕಳುಹಿಸಲಾಗಿತ್ತು.
ವಿಚಿತ್ರ ಎಂದರೆ ಈ ಸ್ಕ್ಯಾನಿಂಗ್ ಸೆಂಟರ್‌ಗೆ ಟವೆಲ್ ಇದ್ದ ವಿಷಯ ಅಂದೇ ಗೊತ್ತಾಗಿತ್ತು. ಆದ್ರೆ ಅವರು ರೋಗಿಗೆ ಹೇಳದೇ, ಸೀದಾ ನರ್ಸಿಂಗ್ ಹೋಂಗೆ ಕರೆ ಮಾಡಿ ಹೀಗೆ ಹೊಟ್ಟೆಯಲ್ಲೇ ಟವೆಲ್ ಬಿಟ್ಟಿದ್ದೀರಿ ಎಂಬ ವಿಷಯ ಮುಟ್ಟಿಸಿದ್ದರು.
ಕೂಡಲೇ ಎಚ್ಚೆತ್ತ ನರ್ಸಿಂಗ್ ಹೋಂನ ವೈದ್ಯರು ಖುದ್ದು ರೋಗಿಗೇ ಕರೆ ಮಾಡಿ ಪುನಃ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ ಎಂದರು.
ಜೊತೆಗೆ ನಿಮ್ಮ ಹೊಟ್ಟೆಯಲ್ಲಿ ಬಟ್ಟೆ ಇದೆ, ತೆಗೆಯುತ್ತೇವೆ ಬನ್ನಿ ಎಂದರು.
ಈ ಬೆಳವಣಿಗೆಗಳ ನಡುವೆಯೇ ಬೆಂಗಳೂರಿನ ಆಸ್ಪತ್ರಗೆ ಸುಲೋಚನಾ ಅವರನ್ನು ಕರೆದೊಯ್ತು ಪುನಃ ಪರೀಕ್ಷೆ ನಡೆಸಲಾಯಿತು. ವೈದ್ಯರು ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟು, ತ್ವರಿತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಸೂಚಿಸಿದರು.
15 ದಿನ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿ 1.5 ಅಡಿ ಉದ್ದದ ಟವೆಲ್ ಹೊರತೆಗೆಯಲಾಗಿದೆ.
ಸುಲೋಚನಾ ಅವರ ಬಂಧುಗಳು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾದ ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಉಡಾಫೆ ಉತ್ತರ ನೀಡಿದ್ದಾರೆ. ಹೀಗಾಗಿ ಟವೆಲ್ ಬಿಟ್ಟ ಆಸ್ಪತ್ರೆ ವಿರುದ್ಧ ಸುಲೋಚನಾ ಪತಿ ಅರುಣ್ ಶೆಟ್ಟಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.