

ಹರಪನಹಳ್ಳಿ: ಸಾಲ ತೀರಿಸುವ ಕುರಿತು ಬ್ಯಾಂಕ್ ನೀಡಿದ್ದ ಸಮನ್ಸ್ ಕಂಡು ಬೆಚ್ಚಿಬಿದ್ದ ತಾಲೂಕಿನ ಒಳತಾಂಡ ಗ್ರಾಮದ ರೈತರೊಬ್ಬರು ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹನುಮನಾಯ್ಕ (65) ಮೃತ ರೈತ.
2007ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹರಿಹರ ಶಾಖೆಯಿಂದ ಹನುಮನಾಯ್ಕ ರು. 7.10 ಲಕ್ಷ ಕೃಷಿ ಸಾಲ ಪಡೆ ದಿದ್ದರು. ಸಾಲ ತೀರಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನವರು ಲೋಕ್ ಅದಾಲತ್‍ನಲ್ಲಿ ದಾವೆ ಹೂಡಿದ್ದರು. 7-2-2015ರಂದು ಹರಿಹರ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವಂತೆ ಹನುಮನಾಯ್ಕ ಅವರಿಗೆ ನೋಟಿಸ್ ಬಂದಿತ್ತು.
ಬಡ್ಡಿ ಸೇರಿ ಸಾಲದ ಮೊತ್ತ ರು.7,34,276 ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಜುಲೈ 24ರಂದು ಮತ್ತೊಂದು ಸಮನ್ಸ್ ಜಾರಿಗೊಳಿಸಿ, ಜು. 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ, ಸಾಲದ ಮೊತ್ತ ಮಾತ್ರ ರು. 17,94,974ಕ್ಕೆ ಏರಿಕೆಯಾಗಿತ್ತು! ಏಕಾಏಕಿ ಈ ಪ್ರಮಾಣದ ಸಾಲ ಕಂಡು ದಿಗ್ಭ್ರಾಂತರಾದ ಹನುಮನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುನುಮನಾಯ್ಕ ಅವರ ಸಾಲದ ಮೊತ್ತದಲ್ಲಿ ಈ ಪ್ರಮಾಣದ ಏರಿಕೆ ಏಕಾಯಿತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮತ್ತೆ ಆತ್ಮಹತ್ಯೆ: ಬೆಳೆ ಹಾನಿಯಿಂದ ನೊಂದಿದ್ದ ನಂಜನಗೂಡು ತಾಲೂಕಿನ ಸಿದ್ದೇಗೌಡನ ಹುಂಡಿಯ ರೈತ ಸ್ವಾಮಿ ಮೊಂಡ (40), ಬೆಳಗಾವಿ ತಾಲೂಕಿನ ಶಿವಾಪುರ ಗ್ರಾಮದ ಕೆಂಪಣ್ಣಾ ಶಂಕರ ಹಂಜಿ(45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರಿಗೂ ಸಾಲವೂ ಇತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೃದಯಾಘಾತ: ಗಂಗಾವತಿ ತಾಲೂಕಿನ ಕಾರಟಗಿ ಸಮೀಪದ ಹಗೇದಾಳ ಗ್ರಾಮದ ರೈತ ಪವಡೆಪ್ಪ ಶ್ಯಾಬಪ್ಪ ನಾಯಕ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಅವರ 15 ಕುರಿಗಳು ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದವು. ರು. 3 ಲಕ್ಷ ಸಾಲ ಮಾಡಿದ್ದರು. ಇವೆಲ್ಲದರಿಂದ ರೈತ ಬಹುದಿನಗಳಿಂದ ಚಿಂತೆಗೀಡಾಗಿದ್ದರು ಎನ್ನಲಾಗಿದೆ.
ಸಿಡಿಲಿಗೆ ರೈತ ಬಲಿ: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಬರೆಮೇಲು ಎಂಬಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾರೆ. ಉಮೇಶ್ ರೈ (58) ಮೃತ ರೈತ. ಶನಿವಾರ ತೋಟದ ಕಡೆ ತೆರಳಿದ್ದ ಉಮೇಶ್, ಮಳೆಯಿಂದಾಗಿ ಅಲ್ಲಿಯೇ ಇದ್ದ ಪಂಪ್‍ಹೌಸ್‍ನಲ್ಲಿ ನಿಂತಿದ್ದರು. ಈ ವೇಳೆ ಸಿಡಿಲು ಬಡಿದಿದೆ.ದಂಡಕ್ಕೆ ಹೆದರಿ ಸಾವು: ಗ್ರಾಮದ ಮುಖಂಡರು ದಂಡ ವಿಧಿಸಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಿದ್ದರಾಮೇಗೌಡ(56) ಅವರು ಮೃತಪಟ್ಟಿದ್ದಾರೆ.
ಮೈಸೂರು ತಾಲೂಕು ಜಯಪುರ ಹೋಬಳಿ ಡಿ. ಸಾಲುಂಡಿ ನಿವಾಸಿಯಾಗಿದ್ದ ಅವರು, ಜು.12 ರಂದು ತಮ್ಮ ಜಮೀನಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಗ್ರಾಮದ ಬಸವೇಶ್ವರ ದೇವಸ್ಥಾನ ಗೋಪುರ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ಜಗಳದಲ್ಲಿ ಗ್ರಾಮದ ಮುಖಂಡರು ಸಿದ್ದರಾಮೇಗೌಡರಿಗೆ ರು.2 ಲಕ್ಷ ದಂಡ ವಿಧಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಬಸಪ್ಪ ದೂರು ನೀಡಿದ್ದಾರೆ.
ಕೆರೆಗೆ ಹಾರಿ ರೈತ ಆತ್ಮಹತ್ಯೆ: ಸಾಲದಿಂದ ಬೇಸತ್ತುನರಗುಂದ ತಾಲೂಕಿನ ಕಲಕೇರಿ ಗ್ರಾಮದ ರೈತ ಮರಿಗೌಡ ವಿರೂಪಾಕ್ಷಗೌಡ ಕೆಂಚನಗೌಡ್ರ (70) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. ಈತ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ರು. 35 ಸಾವಿರ ಸಾಲ ಪಡೆದಿದ್ದರು. ಸ್ವಂತ 6 ಎಕರೆ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಿದ್ದ. ಮಳೆಯಾಗದ್ದರಿಂದ ಬೆಳೆ ಹಾನಿಯಾಗಿತ್ತು.