

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಸಾಮಾನ್ಯ ಕ್ಷೇತ್ರದ ವಾರ್ಡ್‍ಗಳಲ್ಲಿ ಮೀಸಲು ಅಭ್ಯರ್ಥಿಗಳಿಗೆ ಟಿಕೆಟ್ ಕೊಡದೆ ಸಾಮಾನ್ಯ ಅಭ್ಯರ್ಥಿಗಳನ್ನೇ ಪರಿಗಣಿಸ ಬೇಕೆಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಕೆಪಿಸಿಸಿಗೆ ನಿರ್ದೇಶನ ನೀಡಿದ್ದಾರೆ. ಪಾಲಿಕೆಯ 198 ವಾರ್ಡ್‍ಗಳಲ್ಲಿ ಅಂದಾಜು 25 ಕಡೆ ಮೀಸಲು ಕ್ಷೇತ್ರದ ಅಭ್ಯರ್ಥಿಗಳು ಟಿಕೆಟ್ ಬಯಸಿದ್ದರು. ಮೀಸಲಾತಿ ಪರಿಷ್ಕರಣೆಯಿಂದಾಗಿ ಕ್ಷೇತ್ರ ಕಳೆದುಕೊಂಡಿರುವ ಟಿಕೆಟ್ ಆಕಾಂಕ್ಷಿಗಳು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಇದಕ್ಕೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳಿಂದ ತೀವ್ರ ವಿರೋಧ ಉಂಟಾಗಿತ್ತು. ಈ ಸಂಬಂಧ ಕೆಪಿಸಿಸಿ ಹಾಗೂ ಎಐಸಿಸಿಗೂ ಕಾರ್ಯಕರ್ತರು ದೂರು ಸಲ್ಲಿಸಿದ್ದರು.
ಟಿಕೆಟ್ ಹಂಚಿಕೆ ಪ್ರಕ್ರಿಯೆಗಳು ಸದ್ಯದಲ್ಲಿಯೇ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಎಐಸಿಸಿ ನಿರ್ದೇಶನ ಮಹತ್ವ ಪಡೆದುಕೊಂಡಿದೆ. ಶನಿವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯು ಟಿಕೆಟ್ ಹಂಚಿಕೆಗೆ ಹಲವು ಮಾನದಂಡಗಳನ್ನು ನಿಗದಿಪಡಿಸಿರುವ ಬೆನ್ನಹಿಂದೆಯೇ ದಿಗ್ವಿಜಯ್ ಸಿಂಗ್ ಸೂಚನೆ ಹೊರ ಬಿದ್ದಿರುವುದರಿಂದ ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದ ಆಕಾಂಕ್ಷಿಗಳಗೆ ನಿರಾಸೆ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಅಹಿಂದ ಸರ್ಕಾರವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಂಥ ಸಂದರ್ಭದಲ್ಲಿ ಸಾಮಾನ್ಯ ಕ್ಷೇತ್ರಗಳಲ್ಲೂ ಮೀಸಲು ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ ನೀಡಿದರೆ ಸರ್ಕಾರ ಹಾಗೂ ಪಕ್ಷದ ವಿರುದ್ಧ ಕೆಟ್ಟಸಂದೇಶ ರವಾನೆ ಆಗಲಿದೆ. ಅದಕ್ಕೆ ಅವಕಾಶ ಕೊಡದಂತೆ ಮೀಸಲಾತಿ ಇಲ್ಲದ ವಾರ್ಡ್‍ಗಳಲ್ಲಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಿಗೆ ಟಿಕೆಟ್ ಪರಿಗಣಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.